Site icon Vistara News

ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಅವಮಾನ; ಪ್ರತಿಪಕ್ಷಗಳಿಂದ ದೂರು

Mallikarjun Kharge

ನವ ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge)ಯನ್ನು ಅವಮಾನಿಸಲಾಗಿದೆ ಎಂದು ಎಲ್ಲ ವಿಪಕ್ಷಗಳ ನಾಯಕರೂ ಸೇರಿ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡುಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಸೂಕ್ತ ಆಸನ ನೀಡಲಿಲ್ಲ. ಅವರ ಹುದ್ದೆಗೆ ಅನುಗುಣವಾದ ಆಸನ ವ್ಯವಸ್ಥೆ ಮಾಡಿರಲಿಲ್ಲ ಎಂದು ಆರೋಪಿಸಿದ್ದಾರೆ.

ಈ ಪತ್ರವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ʼಇಂದು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇತ್ತು. ಆದರೆ ಕಾಂಗ್ರೆಸ್‌ ಹಿರಿಯ ನಾಯಕ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ನಾಯಕರೂ ಆಗಿರುವ ಮಲ್ಲಿಕಾರ್ಜುನ್‌ ಖರ್ಗೆಗೆ ಸರಿಯಾದ ಆಸನ ನೀಡದೆ ಅವಮಾನ ಮಾಡಲಾಗಿದೆ. ಅವರ ಹುದ್ದೆಗೆ ತಕ್ಕದಾಗಿ ಯಾವ ರೀತಿಯ ಸೀಟ್‌ ಕೊಡಬೇಕಿತ್ತೋ, ಅಂಥದ್ದನ್ನು ಕೊಡಲಿಲ್ಲʼ ಎಂದು ಹೇಳಿದ್ದಾರೆ. ಪತ್ರಕ್ಕೆ ವಿವಿಧ ಪ್ರತಿಪಕ್ಷಗಳ ನಾಯಕರು ಸಹಿ ಮಾಡಿದ್ದಾರೆ.

ಪ್ರಲ್ಹಾದ್‌ ಜೋಶಿ ಸ್ಪಷ್ಟನೆ
ಪ್ರತಿಪಕ್ಷಗಳ ಈ ಆರೋಪಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ʼಕಾರ್ಯಕ್ರಮಗಳಲ್ಲಿ ಆಸನ ವ್ಯವಸ್ಥೆಗೆ ಸಂಬಂಧಪಟ್ಟಂತೆ ಗೃಹ ಇಲಾಖೆ ರೂಪಿಸಿರುವ ಶಿಷ್ಟಾಚಾರದ ಅನ್ವಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೂರನೇ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಅದೇ ರಾಮನಾಥ ಕೋವಿಂದ್‌ ಬೀಳ್ಕೊಡುಗೆ ಸಮಾರಂಭದಲ್ಲಿ ಅವರಿಗೆ ಮೊದಲ ಸಾಲಿನಲ್ಲಿಯೇ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಹೇಳಿದ್ದಾರೆ. “ಪ್ರತಿಪಕ್ಷಗಳು ಪ್ರತಿಯೊಂದು ವಿಚಾರದಲ್ಲೂ ಅನಗತ್ಯ ವಿವಾದ ಸೃಷ್ಟಿಸುತ್ತಿವೆ” ಎಂದೂ ಆರೋಪಿಸಿದ್ದಾರೆ.

ಇದನ್ನೂ ಓದಿ: ಹಿಂದುಳಿದ ವರ್ಗದವರ ಪಾಲಿಗಿಂದು ಪರ್ವಕಾಲ; ದ್ರೌಪದಿ ಮುರ್ಮುಗೆ ಶುಭ ಕೋರಿದ ಪ್ರಧಾನಿ

Exit mobile version