Site icon Vistara News

ಕೆಂಪು ಕಣ್ಣುಗಳಿಗೆ ಚೀನಾ ಕನ್ನಡಕ ಹಾಕಿಕೊಂಡಿದೆ ಮೋದಿ ಸರ್ಕಾರ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ವಾಗ್ದಾಳಿ

Mallikarjun Kharge on India China Border Dispute

ನವ ದೆಹಲಿ: ಅರುಣಾಚಲ ಪ್ರದೇಶದ ತವಾಂಗ್​ ವಲಯದಲ್ಲಿ ಭಾರತ-ಚೀನಾ ಮಧ್ಯೆ ಡಿಸೆಂಬರ್​ 9ರಂದು ನಡೆದ ಘರ್ಷಣೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಎಷ್ಟೇ ಒತ್ತಾಯ ಮಾಡಿದರೂ ಕೇಂದ್ರ ಸರ್ಕಾರ ನುಣುಚಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಖರ್ಗೆ, ‘ಭಾರತದ ಸಂಸತ್ತಿನಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲವೇ? ಮೋದಿ ಸರ್ಕಾರ ತನ್ನ ಕೆಂಪು ಕಣ್ಣನ್ನು ಚೀನಾ ಕನ್ನಡಕದಿಂದ ಮುಚ್ಚಿಕೊಂಡಿದೆ ಎಂದು ತೋರುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿಯಾಗಿಯೇ ಕಾಣುತ್ತದೆ ಎಂಬ ಒಂದು ಮಾತಿದೆ. ಹಾಗೇ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ಕೆಂಪಾದ ಕಣ್ಣಿಗೆ ಚೀನಾ ಎಂಬ ಕನ್ನಡಕ ಹಾಕಿಕೊಂಡಿದ್ದರಿಂದ, ಅದಕ್ಕೂ ಎಲ್ಲವೂ ಚೀನಾ ಪರವಾಗಿಯೇ ಕಾಣಿಸುತ್ತಿದೆ. ಹೀಗಾಗಿ ಚೀನಾ ವಿರುದ್ಧ ಮಾತನಾಡುವುದು, ಚರ್ಚೆ ಮಾಡುವುದು ಕೇಂದ್ರಕ್ಕೆ ಇಷ್ಟವಾಗುತ್ತಿಲ್ಲ ಎಂಬರ್ಥದಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಈ ಮಾತುಗಳನ್ನಾಡಿದ್ದಾರೆ.

ಭಾರತ-ಚೀನಾ ಸೈನಿಕರ ನಡುವಿನ ಬಡಿದಾಟದ ವಿಷಯದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸುತ್ತಿವೆ. ಡಿ.11ರಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡಿ ಈ ಸಂಘರ್ಷದ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಚೀನಾ ಸೈನಿಕರು ಭಾರತದ ಭೂಭಾಗ ಅತಿಕ್ರಮಿಸಲು ಬಂದಾಗ, ಭಾರತೀಯ ಸೇನಾ ಯೋಧರು ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು ಎಂದು ವಿವರಿಸಿದ್ದಾರೆ. ಆದರೆ ಪ್ರತಿಪಕ್ಷಗಳಿಗೆ ಸಮಾಧಾನ ಆಗುತ್ತಿಲ್ಲ. ಬುಧವಾರ ಕೂಡ 17 ವಿಪಕ್ಷಗಳು ಇದೇ ಆಗ್ರಹ ಮುಂದಿಟ್ಟವು. ಕಲಾಪದ ಶೂನ್ಯವೇಳೆಯನ್ನು ಅಮಾನತು ಮಾಡಿ, ಭಾರತ-ಚೀನಾ ಘರ್ಷಣೆ ಬಗ್ಗೆ ಸಮಗ್ರವಾಗಿ ಚರ್ಚಿಸೋಣ ಎಂದು ಆಗ್ರಹ ಮುಂದಿಟ್ಟಾಗ ಸ್ಪೀಕರ್​ ಓಂಬಿರ್ಲಾ ಅದಕ್ಕೆ ಆಸ್ಪದ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಪ್ರತಿಪಕ್ಷಗಳ ನಾಯಕರೆಲ್ಲ ಸದನದಿಂದ ಹೊರನಡೆದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಮಲ್ಲಿಕಾರ್ಜುನ್​ ಖರ್ಗೆ ಈ ರೀತಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮಲ್ಲಿಕಾರ್ಜುನ್​ ಖರ್ಗೆಗೆ ಇನ್ನೊಂದು ಹುದ್ದೆ?; ಇಬ್ಬರು ಪ್ರಮುಖ ನಾಯಕರನ್ನು ಬಿಟ್ಟು ಸೋನಿಯಾ ಗಾಂಧಿ ನಡೆಸಿದ ಸಭೆಯ ಗುಟ್ಟೇನು?

Exit mobile version