Site icon Vistara News

Congress President | ಅಧ್ಯಕ್ಷ ಸ್ಥಾನ ಚುನಾವಣೆಗೆ ಕೊನೇ ಕ್ಷಣದಲ್ಲಿ ಪ್ರವೇಶ ಮಾಡಿದ ಮಲ್ಲಿಕಾರ್ಜುನ್ ಖರ್ಗೆ?

Mallikarjun Kharge

ನವ ದೆಹಲಿ: ಅಕ್ಟೋಬರ್​ 17ರಂದು ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ತಿರುವನಂತಪುರಂ ಸಂಸದ ಶಶಿ ತರೂರ್​, ಹಿರಿಯ ನಾಯಕ ದಿಗ್ವಿಜಯ ಸಿಂಗ್​ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಹಾಗೇ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ, ಕರ್ನಾಟಕ ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಕೂಡ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ದೃಢಪಟ್ಟಿರಲಿಲ್ಲ. ಇಂದು ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿದ್ದು, ಮಲ್ಲಿಕಾರ್ಜುನ್​ ಖರ್ಗೆ ಸ್ಪರ್ಧೆಯೂ ಬಹುತೇಕ ಖಚಿತ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ. ಮಲ್ಲಿಕಾರ್ಜುನ್​ ಖರ್ಗೆ ಇಂದು ಸೋನಿಯಾ ಗಾಂಧಿಯವರನ್ನು ಭೇಟಿಯಾಗಲಿದ್ದು, ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಮಲ್ಲಿಕಾರ್ಜುನ್​ ಖರ್ಗೆ ಕಾಂಗ್ರೆಸ್​​ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. ಎಂಟು ಬಾರಿ ಶಾಸಕರಾದವರು ಮತ್ತು ಎರಡು ಸಲ ಸಂಸದರಾಗಿ ಹುದ್ದೆ ನಿಭಾಯಿಸಿದವರು. ಪ್ರಸ್ತುತ ರಾಜ್ಯಸಭೆ ಸದಸ್ಯರಾಗಿದ್ದು, ಪ್ರತಿಪಕ್ಷ ನಾಯಕನ ಸ್ಥಾನದಲ್ಲಿದ್ದಾರೆ. ದಲಿತ ಸಮುದಾಯದ ಪ್ರಭಾವಿ ನಾಯಕನಾದ ಇವರು 2005ರಿಂದ 2008ರವರೆಗೆ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ) ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1999ರಿಂದ 2004ರವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಎಸ್​.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಗೃಹ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದಾರೆ.

ಅಷ್ಟೇ ಅಲ್ಲ, ಕೇಂದ್ರದಲ್ಲಿ ಮನಮೋಹನ್​ ಸಿಂಗ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವಿದ್ದಾಗ ಮಲ್ಲಿಕಾರ್ಜುನ್​ ಖರ್ಗೆ ಕೇಂದ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2009ರಿಂದ 2013ರವರೆಗೆ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಚಿವರಾಗಿ, 2013ರಿಂದ 2014ರವರೆಗೆ ರೈಲ್ವೆ ಇಲಾಖೆ ಸಚಿವರಾಗಿದ್ದರು. ಅದಾದ ಮೇಲೆ 2014ರಿಂದ 2019ರವರೆಗೆ ಲೋಕಸಭೆ ಕಾಂಗ್ರೆಸ್​ ನಾಯಕರಾಗಿದ್ದ ಖರ್ಗೆ, ಪ್ರಸ್ತುತ ರಾಜ್ಯಸಭೆಯಲ್ಲಿ ಇದ್ದಾರೆ.

ಶಶಿ ತರೂರ್​ ಮತ್ತು ದಿಗ್ವಿಜಯ ಸಿಂಗ್​ ಅವರು ಇಂದು ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆಯೂ ನಾಮಪತ್ರ ಸಲ್ಲಿಕೆ ಮಾಡುವುದು ಬಹುತೇಕ ಪಕ್ಕಾ ಎಂದೂ ಹೇಳಲಾಗಿದೆ. ಅದರಾಚೆಗೆ ಅಧ್ಯಕ್ಷ ಸ್ಥಾನದ ರೇಸ್​​ನಲ್ಲಿ ಕಾಂಗ್ರೆಸ್​ ನಾಯಕರಾದ ಮುಕುಲ್ ವಾಸ್ನಿಕ್ ಮತ್ತು ಕುಮಾರಿ ಸೆಲ್ಜಾ ಹೆಸರುಗಳೂ ಕೇಳಿಬರುತ್ತಿವೆ. ಇದೆಲ್ಲದರ ಮಧ್ಯೆ ಪ್ರಥ್ವಿರಾಜ್​ ಚೌಹಾಣ್​, ಮನೀಶ್​ ತಿವಾರಿ, ಭೂಪಿಂದರ್​ ಹೂಡಾ ಮತ್ತು ಇತರ ಜಿ 23 ನಾಯಕರು ಸೇರಿ ಆನಂದ್​ ಶರ್ಮಾ ನಿವಾಸದಲ್ಲಿ ಮಹತ್ವದ ಸಭೆಯೊಂದನ್ನು ನಡೆಸಿದ್ದಾರೆ ಎಂದೂ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ನೀಡಲಿ: ರಮೇಶ್‌ ಬಾಬು ಆಗ್ರಹ

Exit mobile version