Site icon Vistara News

ಅದಾನಿ ಆರ್ಥಿಕ ಹಗರಣದ ತನಿಖೆ ಸಂಸದೀಯ ಸಮಿತಿಯಿಂದ ನಡೆಯಲಿ; ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಆಗ್ರಹ

mallikarjun kharge Parliamentary panel probe Over Adani stock crash

#image_title

ನವ ದೆಹಲಿ: ಅದಾನಿ ಷೇರು ಕುಸಿತ, ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಫಾಲೋ ಆನ್​ ಪಬ್ಲಿಕ್ ಆಫರ್​ (FPO)ಗಳನ್ನು ಅದಾನಿ ಎಂಟರ್​ಪ್ರೈಸಸ್​ ವಾಪಸ್​ ಪಡೆಯಲು ನಿರ್ಧರಿಸಿದ್ದನ್ನೆಲ್ಲ ಒಂದು ಆರ್ಥಿಕ ಹಗರಣ ಎಂದು ಕರೆದಿರುವ ಪ್ರತಿಪಕ್ಷಗಳು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ‘ಅದಾನಿ ಗ್ರೂಪ್​ನಿಂದ ನಡೆದ ಆರ್ಥಿಕ ಹಗರಣದ ತನಿಖೆ ಮಾಡಲು ಸಂಸದೀಯ ಸಮಿತಿ ಅಥವಾ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಮೇಲುಸ್ತುವಾರಿಯಲ್ಲಿ ಸುಪ್ರೀಂಕೋರ್ಟ್​​ನಿಂದ ನೇಮಕಗೊಂಡ ಸಮಿತಿ ರಚನೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ಇಂದು ಬಜೆಟ್​ ಅಧಿವೇಶನ ಪ್ರಾರಂಭಗೊಂಡ ಕೆಲವೇ ಕ್ಷಣಗಳಲ್ಲಿ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಕಲಾಪ ಮುಂದೂಡಲ್ಪಟ್ಟಿತು. ಸದನದಿಂದ ಹೊರಬಿದ್ದ ಪ್ರತಿಪಕ್ಷಗಳ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಇದರಲ್ಲಿ ಮಾತನಾಡಿ ಮಲ್ಲಿಕಾರ್ಜುನ್ ಖರ್ಗೆ ‘ಇದೀಗ ಅದಾನಿ ಗ್ರೂಪ್​​ನಿಂದ ನಡೆದ ಆರ್ಥಿಕ ಹಗರಣದ ಬಗ್ಗೆ ಸಂಸತ್ತಿನಲ್ಲಿ ಎಲ್ಲ ಪ್ರತಿಪಕ್ಷದವರೂ ಒಟ್ಟಾಗಿ ಧ್ವನಿ ಎತ್ತಿದ್ದೇವೆ. ಅದಾನಿ ಷೇರು ಕುಸಿತಗೊಂಡ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಅವ್ಯವಸ್ಥೆ ಬಗ್ಗೆ ಚರ್ಚಿಸಲು ನಾವು ಸಮಯ ಕೇಳಿದ್ದೇವೆ. ಇದೊಂದು ತುರ್ತು ಚರ್ಚೆಗೆ ಕೈಗೆತ್ತಿಕೊಳ್ಳುವ ವಿಷಯ ಎಂದು ನಾವು ಹೇಳಿದ್ದೇವೆ. ಆದರೆ ನಮಗೆ ಅವಕಾಶವೇ ಸಿಗುತ್ತಿಲ್ಲ’ ಎಂದು ಖರ್ಗೆ ಹೇಳಿದರು. ಹಾಗೇ, ಕೇಂದ್ರ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅದಾನಿ ಎಂಟರ್‌ಪ್ರೈಸಸ್‌ 20,000 ಕೋಟಿ ರೂ.ಗಳ ಹೆಚ್ಚುವರಿ ಷೇರುಗಳನ್ನು ಬಿಡುಗಡೆಗೊಳಿಸಿದ ಬಳಿಕ ಬುಧವಾರ ಕಂಪನಿಯ ಷೇರು ದರದಲ್ಲಿ 30% ತನಕ ಕುಸಿತ ಸಂಭವಿಸಿತು. ಕ್ರೆಡಿಟ್‌ ಸ್ವೀಸ್‌, ಅದಾನಿ ಸಮೂಹದ ಕಂಪನಿಗಳ ಬಾಂಡ್‌ಗಳನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಿರುವ ಬಗ್ಗೆ ವರದಿಯ ಹಿನ್ನೆಲೆಯಲ್ಲಿ ಷೇರು ದರ ಕುಸಿದಿದೆ. ಅದಾನಿ ಸಮೂಹದ ಎಲ್ಲ 10 ಷೇರುಗಳ ದರಗಳೂ ಕುಸಿತಕ್ಕೀಡಾಯಿತು. ಅದಾನಿ ಪೋರ್ಟ್‌ (15%), ಅದಾನಿ ಟೋಟಲ್‌ ಗ್ಯಾಸ್‌ (10%), ಅಂಬುಜಾ ಸಿಮೆಂಟ್‌ (10%) ಷೇರು ದರ ಮಧ್ಯಂತರದಲ್ಲಿ ಕುಸಿತಕ್ಕೀಡಾಯಿತು. ಹಿಂಡೆನ್‌ಬರ್ಗ್‌ ವರದಿ ಪ್ರಕಟವಾದ ಬಳಿಕ ಅದಾನಿ ಗ್ರೂಪ್‌ ಕಂಪನಿಗಳ ಷೇರು ದರಗಳು ಕುಸಿಯುತ್ತಲೇ ಇವೆ. ಇದೀಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: Parliament Session: ಬಜೆಟ್​ ಅಧಿವೇಶನದಲ್ಲಿ ಅದಾನಿ ಷೇರು ಕುಸಿತ ಗಲಾಟೆ; ಎರಡೂ ಸದನಗಳ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

Exit mobile version