Site icon Vistara News

ಅಮಿತ್​ ಶಾ ಅವರೇನು ಅಯೋಧ್ಯಾ ರಾಮಮಂದಿರದ ಮುಖ್ಯ ಪೂಜಾರಿನಾ? ಯಾಕೆ ಹೀಗೆ ಮಾಡ್ತಾರೆ ಅವರು?-ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ

Mallikarjun Kharge

ಪಾಣಿಪತ್​: 2024ರ ಜನವರಿಯಿಂದ ಅಯೋಧ್ಯಾ ಶ್ರೀರಾಮಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗುತ್ತದೆ. ಜನರು ಶ್ರೀರಾಮನ ದರ್ಶನ ಪಡೆಯಬಹುದು ಎಂದು ತ್ರಿಪುರದಲ್ಲಿ ಜನವರಿ 5ರಂದು ನಡೆದ ಜನ ವಿಶ್ವಾಸ ಯಾತ್ರೆಯಲ್ಲಿ ಗೃಹ ಸಚಿವ ಅಮಿತ್​ ಶಾ ಅವರು ಘೋಷಣೆ ಮಾಡಿದ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಾಮಮಂದಿರ ಯಾವಾಗ ತೆರೆಯಲ್ಪಡುತ್ತದೆ, ಭಕ್ತರ ಪ್ರವೇಶ ಯಾವಾಗಿನಿಂದ ಎಂದು ಘೋಷಣೆ ಮಾಡುಲು ಅಮಿತ್ ಶಾ ಅವರೇನು ಶ್ರೀರಾಮಮಂದಿರದ ಪೂಜಾರಿಯಾ? ಮುಖ್ಯ ಅರ್ಚಕರಾ?’ ಎಂದು ಪ್ರಶ್ನಿಸಿದ್ದಾರೆ.

ಹರಿಯಾಣದ ಪಾಣಿಪತ್​​ನಲ್ಲಿ, ಕಾಂಗ್ರೆಸ್ ಭಾರತ್​ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ‘ರಾಮ ಮಂದಿರ ಯಾವಾಗ ಪೂರ್ಣಗೊಳ್ಳುತ್ತದೆ, ಯಾವಾಗ ಭಕ್ತರಿಗೆ ಪ್ರವೇಶ ಸಿಗುತ್ತದೆ ಎಂಬಿತ್ಯಾದಿಯನ್ನು ದೇಗುಲದ ಮಹಾಂತ್​/ ಮುಖ್ಯ ಅರ್ಚಕರು ಹೇಳಲಿ ಬಿಡಿ. ಗೃಹ ಸಚಿವ ಕೆಲಸ ಈ ದೇಶದ ಕಾನೂನು-ಸುವ್ಯವಸ್ಥೆಯನ್ನು ಬಲಪಡಿಸುವುದು, ಜನಸಾಮಾನ್ಯರಿಗೆಲ್ಲರಿಗೂ ಸರಿಯಾಗಿ ಆಹಾರ ಸಿಗುತ್ತಿದೆಯಾ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳುವುದು ಮತ್ತು ರೈತರು ಬೆಳೆವ ಬೆಳೆಗೆ ಅನುಗುಣವಾಗಿ ಅವರಿಗೆ ಬೆಲೆ ನೀಡುವುದು. ಅದು ಬಿಟ್ಟು ರಾಮಮಂದಿರದ ವಿಷಯವನ್ನೇಕೆ ಮಾತನಾಡುತ್ತೀರಿ’ ಎಂದು ಪ್ರಶ್ನಿಸಿದರು.

ಎಲ್ಲರಿಗೂ ದೇವರ ಮೇಲೆ ನಂಬಿಕೆ ಇದೆ. ಆದರೆ ರಾಮಮಂದಿರ ವಿಚಾರ ಬಂದಾಗ ಬಿಜೆಪಿಯವರು ಯಾಕೆ ಅತಿಯಾಗಿ ಆಡುತ್ತಾರೆ. ಗೃಹ ಸಚಿವರು ಹೀಗೆ, ದೇಗುಲ ತೆರೆಯುವ ದಿನಾಂಕವನ್ನೆಲ್ಲ ಘೋಷಣೆ ಮಾಡಬಹುದಾ? ಅದೂ ಕೂಡ ಚುನಾವಣೆ ನಡೆಯಲಿರುವ ತ್ರಿಪುರದಲ್ಲಿ..! 2024ರ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಯೂ ನಡೆಯಲಿಕ್ಕಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಗೃಹ ಸಚಿವರು ರಾಮಮಂದಿರದ ವಿಷಯ ಮಾತನಾಡಿದ್ದಾರೆ ಎಂದು ಮಲ್ಲಿಕಾರ್ಜುನ್​ ಖರ್ಗೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Ram Mandir | 2024ರ ಜನವರಿಯಲ್ಲಿ ಭಕ್ತರಿಗೆ ರಾಮಮಂದಿರ ಮುಕ್ತ, ಅಮಿತ್‌ ಶಾ ಮಹತ್ವದ ಘೋಷಣೆ

Exit mobile version