ನವದೆಹಲಿ: 2024ರ ಲೋಕಸಭಾ ಚುನಾವಣೆ (2024 Lok Sabha Election) ಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳೆಲ್ಲ ಒಟ್ಟಾಗಿದ್ದು, ಅದರ ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಳ್ಳಲಿದೆ ಎಂದು ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇತ್ತೀಚೆಗೆ ಹೇಳಿದ್ದಾರೆ. ಆದರೆ ಮತ್ತೊಂದೆಡೆ ಕಾಂಗ್ರೆಸ್ನ್ನು ಕೈಬಿಟ್ಟು ಮೈತ್ರಿ ಮಾಡಿಕೊಳ್ಳಲು ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷಗಳು ಮುಂದಾಗಿದೆ. ಎಸ್ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ ಸಮಯದಲ್ಲಿ ಇಂಥದ್ದೊಂದು ಒಪ್ಪಂದಕ್ಕೆ ಬರಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ದೂರದಲ್ಲೇ ಇಡಲು ಇವರು ನಿರ್ಧಾರ ಮಾಡಿಕೊಂಡಿದ್ದಾರೆ. ‘ಬಿಜೆಪಿ ವಿರುದ್ಧ ಹೋರಾಡಲು ನಾವೀಗ ರಚಿಸಿಕೊಂಡಿರುವ ಹೊಸ ಮೈತ್ರಿಯಲ್ಲಿ ಕಾಂಗ್ರೆಸ್ನ ಪಾತ್ರ ಏನೇನೂ ಇರುವುದಿಲ್ಲ. ಇನ್ನುಳಿದ ರಾಜಕೀಯ ಪಕ್ಷಗಳು ಅವಕ್ಕೆ ಏನಿಷ್ಟವೋ, ಅದನ್ನು ಮಾಡಬಹುದು’ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಮಾರ್ಚ್ 17ರಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ಬಳಿಕ ಮಾತನಾಡಿದ ಅಖಿಲೇಶ್ ಯಾದವ್ ‘ಪ್ರಾದೇಶಿಕ ಪಕ್ಷಗಳ ಪಾತ್ರವೇನು ಎಂದು ನಿರ್ಧರಿಸುವಷ್ಟು, ಹೇಗೆ ಸ್ಪರ್ಧಿಸಬೇಕು ಎಂದು ತೀರ್ಮಾನಿಸುವಷ್ಟು ಸಮರ್ಥವಾಗಿದ್ದಾವೆ. ಕಾಂಗ್ರೆಸ್ ಅದರ ಪಾತ್ರವನ್ನು ಮಾತ್ರ ನಿರ್ಧರಿಸಿಕೊಂಡರೆ ಸಾಕು. ಬಿಜೆಪಿ ವಿರುದ್ಧ ಹೋರಾಟಕ್ಕೆ ತೊಡಕಾಗುವ ಯಾವುದೇ ನಿರ್ಧಾರಗಳನ್ನೂ, ಯಾವ ಪಕ್ಷಗಳೂ ಕೈಗೊಳ್ಳಬಾರದು’ ಎಂದು ಹೇಳಿದರು.
ಆರಂಭದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ವಿಪಕ್ಷಗಳು ಒಟ್ಟಾಗಲು ಪ್ರಯತ್ನ ಭರ್ಜರಿಯಾಗಿಯೇ ನಡೆದಿತ್ತು. ಆದರೆ ಕಾಂಗ್ರೆಸ್ನ್ನು ಮೊದಲಿನಿಂದಲೂ ಪ್ರಾದೇಶಿಕ ಪಕ್ಷಗಳು ಸ್ವಲ್ಪ ದೂರವೇ ಇಟ್ಟಿದ್ದರು. ಅದರಲ್ಲೂ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಸಿಡಿದೆದ್ದಿದ್ದರು. ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿಯಿಲ್ಲ. ಕಾಂಗ್ರೆಸ್ನ್ನು ನಂಬುವುದೂ ಇಲ್ಲ ಎಂದಿದ್ದರು. ಮಾರ್ಚ್ 6ರಂದು ಅಖಿಲೇಶ್ ಯಾದವ್ ಕೂಡ ಇದನ್ನೇ ಹೇಳಿದ್ದರು. ‘ನಾವು ಕಾಂಗ್ರೆಸ್ನೊಟ್ಟಿಗೆ ಯಾವ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದಿದ್ದರು. ಅಂತಿಮವಾಗಿ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಸೇರಿ ಹೊಸ ರಂಗ ಸ್ಥಾಪನೆ ಮಾಡಿದ್ದಾರೆ. ಕಾಂಗ್ರೆಸ್ ಕೈ ಬಿಟ್ಟಿದ್ದಾರೆ.
ಇದನ್ನೂ ಓದಿ: 2024 Election : 2024ರ ಚುನಾವಣೆಯಲ್ಲಿ ಮೋದಿ ವಿಜಯಕ್ಕೆ ಶಿವಸೇನೆ, ಜೆಡಿಯು ಅಡ್ಡಗಾಲು? ಹೀಗಿದೆ ಲೆಕ್ಕಾಚಾರ