Site icon Vistara News

SSC scam | ಸಚಿವ ಸ್ಥಾನ ಕಳೆದುಕೊಂಡ ಪಾರ್ಥ ಚಟರ್ಜಿ; ಸಿಎಂ ಮಮತಾ ಬ್ಯಾನರ್ಜಿ ಆದೇಶ

Mamata sacks Partha Chatterjee

ಕೋಲ್ಕತ್ತ: ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿ ಇ ಡಿಯಿಂದ ಬಂಧಿತನಾಗಿರುವ ಟಿಎಂಸಿ ನಾಯಕ ಪಾರ್ಥ ಚಟರ್ಜಿಯವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ. ಇಂದು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆ ಮುಗಿಯುತ್ತಿದ್ದಂತೆ ಮಮತಾ ಬ್ಯಾನರ್ಜಿ ಆದೇಶ ಹೊರಡಿಸಿ, ಪಾರ್ಥ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದಾಗಿ ತಿಳಿಸಿದ್ದಾರೆ.

ಪಾರ್ಥ ಚಟರ್ಜಿ ಸದ್ಯ ಪಶ್ಚಿಮ ಬಂಗಾಳದಲ್ಲಿ ವಾಣಿಜ್ಯ ಮತ್ತು ಉದ್ಯಮ ಇಲಾಖೆ ಸಚಿವರಾಗಿದ್ದರು. ಅದರೊಂದಿಗೆ ಸಂಸದೀಯ ವ್ಯವಹಾರಗಳ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌, ಸಾರ್ವಜನಿಕ ಉದ್ಯಮ ಮತ್ತು ಕೈಗಾರಿಕಾ ಪುನನಿರ್ಮಾಣ ಇಲಾಖೆಗಳೂ ಅವರ ಕೈಯಲ್ಲೇ ಇದ್ದವು. ಇದೀಗ ಸಚಿವ ಸ್ಥಾನದಿಂದಲೇ ಅವರನ್ನು ತೆಗೆದುಹಾಕಲಾಗಿದ್ದು, ಅವರ ಬಳಿಯಿದ್ದ ಅಷ್ಟೂ ಇಲಾಖೆಗಳನ್ನೂ ಹಿಂಪಡೆಯಲಾಗಿದೆ. ಇನ್ನೊಬ್ಬರಿಗೆ ಸಚಿವ ಸ್ಥಾನ ಕೊಡುವವರೆಗೂ ಈ ಎಲ್ಲ ಇಲಾಖೆಗಳೂ ಮಮತಾ ಬ್ಯಾನರ್ಜಿ ಉಸ್ತುವಾರಿಯಲ್ಲೇ ಇರಲಿವೆ. ಇನ್ನು ಪಾರ್ಥ ಅವರನ್ನು ಬರಿ ಸಚಿವ ಸ್ಥಾನದಿಂದ ಅಷ್ಟೇ ಅಲ್ಲ, ಪ್ರಧಾನ ಕಾರ್ಯದರ್ಶಿ ಸೇರಿ, ಪಕ್ಷದ ಇನ್ನಿತರ ಸಾಂಸ್ಥಿಕ ಹುದ್ದೆಗಳಿಂದಲೂ ವಜಾಗೊಳಿಸಲಾಗಿದೆ.

ಪಾರ್ಥ ಚಟರ್ಜಿಯನ್ನು ವಜಾಗೊಳಿಸಿದ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ, “ತೃಣಮೂಲ ಕಾಂಗ್ರೆಸ್‌ನಲ್ಲಿ ಎಲ್ಲ ನಿಯಮಗಳೂ ಕಠಿಣ. ಹೀಗಾಗಿಯೇ ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನ ಮತ್ತು ಸಾಂಸ್ಥಿಕ ಹುದ್ದೆಗಳಿಂದ ವಜಾಗೊಳಿಸಿದ್ದೇವೆ. ಹಗರಣ, ಅಕ್ರಮದಲ್ಲಿ ಪಾಲ್ಗೊಂಡೂ ಟಿಎಂಸಿಯಲ್ಲಿ ಉಳಿಯಬಹುದು ಎಂಬ ಭಾವ ಯಾರಿಗೂ ಬರಬಾರದುʼ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಾರ್ಥ ಚಟರ್ಜಿ ಹೆಸರು ಕೇಳಿಬಂದಿದೆ. ಅವರ ಆಪ್ತೆ ಅರ್ಪಿತಾ ಮನೆಯಲ್ಲಿ ಇದುವರೆಗೆ 50 ಕೋಟಿ ರೂಪಾಯಿ ನಗದು, ಅಪಾರ ಆಭರಣಗಳು ಪತ್ತೆಯಾಗಿದೆ. ಅದರ ಬೆನ್ನಲ್ಲೇ, ಟಿಎಂಸಿಯ ವಕ್ತಾರರಾದ ಕುನಾಲ್‌ ಘೋಷ್‌, ದೇಭಾಂಶು ಭಟ್ಟಾಚಾರ್ಯ ಸೇರಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಪಾರ್ಥ ಚಟರ್ಜಿ ಇಡೀ ಪಕ್ಷ, ಸರ್ಕಾರದ ಮಾನ ಕಳೆಯುತ್ತಿದ್ದಾರೆ. ಅವರನ್ನು ಕೂಡಲೇ ಟಿಎಂಸಿಯಿಂದಲೇ ಅಮಾನತು ಮಾಡಿ ಎಂದು ಆಗ್ರಹಿಸಿ, ಟ್ವೀಟ್‌ ಕೂಡ ಮಾಡಿಕೊಂಡಿದ್ದರು. ಬಳಿಕ ಮಮತಾ ಬ್ಯಾನರ್ಜಿ ಸಂಪುಟ ಸಭೆ ಕರೆದು, ಇದೇ ವಿಚಾರವನ್ನು ಚರ್ಚಿಸಿದ್ದರು. ಹಾಗೇ, ಇಂದು ಸಂಜೆ (ಜುಲೈ 28) ೫ಗಂಟೆಗೆ ಕೋಲ್ಕತ್ತದಲ್ಲಿರುವ ಟಿಎಂಸಿ ಪ್ರಧಾನ ಕಚೇರಿಯಲ್ಲಿ ಶಿಸ್ತು ಸಮಿತಿ ಸಭೆ ನಡೆಯಲಿದೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ತಿಳಿಸಿದ್ದಾರೆ.

ಪಾರ್ಥ ಚಟರ್ಜಿ ರಕ್ಷಣೆಯ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ. ಪಾರ್ಥ ಹೀಗೆ ಮಾಡುತ್ತಾರೆ ಎಂದರೆ ನಂಬಿಕೆ ಬರುತ್ತಿಲ್ಲ. ಅವರ ಬಂಧನದಿಂದ ವೈಯಕ್ತಿಕವಾಗಿ ನೋವಾಗಿದೆ ಎಂದಷ್ಟೇ ಹೇಳಿದ್ದರು. ಅಷ್ಟೇ ಅಲ್ಲ, ʼತಪ್ಪಿತಸ್ಥರು ಯಾರೇ ಆಗಿರಲಿ, ಅವರು ನಮ್ಮ ಸರ್ಕಾರದಲ್ಲಿ ಸಚಿವರೇ ಆಗಿರಲಿ, ಅವರನ್ನು ಹಾಗೇ ಬಿಟ್ಟುಬಿಡುವ ಪ್ರಶ್ನೆಯೇ ಇಲ್ಲʼ ಎಂದೂ ಹೇಳಿಕೊಂಡಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಂಧಿತ ಸಚಿವ ಪಾರ್ಥ ಚಟರ್ಜಿ ಉಚ್ಚಾಟನೆಗೆ ಸ್ವಪಕ್ಷೀಯರಿಂದಲೇ ಆಗ್ರಹ

Exit mobile version