ಕೋಲ್ಕತ್ತ: ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿದ ಹೇಳಿಕೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದೂ ಕೂಡ ಮುಂದುವರಿದಿದೆ. ಹೌರಾಹ್ ಜಿಲ್ಲೆಯಲ್ಲಿ, ಅಲ್ಪಸಂಖ್ಯಾತರೇ ಜಾಸ್ತಿ ಇರುವ ಪಂಚಾಲ್ ಏರಿಯಾದಲ್ಲಿ ಇಂದು ಮುಂಜಾನೆಯೇ ಗಲಾಟೆ ಪ್ರಾರಂಭವಾಗಿತ್ತು. ಅವರನ್ನು ಚದುರಿಸಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಶುಕ್ರವಾರ ಸಂಜೆ ಡೊಮ್ಜುರ್ ಎಂಬಲ್ಲಿ ಹಿಂಸಾಚಾರ ನಡೆದಿತ್ತು. ಇದೂ ಕೂಡ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶ. ಇಲ್ಲಿ ಪ್ರತಿಭಟನಾಕಾರರು ಪೊಲೀಸ್ ಸ್ಟೇಶನ್ ಮೇಲೆಯೇ ದಾಳಿ ನಡೆಸಿದ್ದಾರೆ. ಪೊಲೀಸ್ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಗಲಭೆಯಲ್ಲಿ 12ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸದ್ಯ ಪಶ್ಚಿಮ ಬಂಗಾಳದಲ್ಲಿ ಹೌರಾಹ್ ಹಿಂಸಾಚಾರದ ಮುಖ್ಯ ಕೇಂದ್ರವಾಗಿ ಮಾರ್ಪಾಡಾಗಿದ್ದು, ಗಲಭೆ ನಿಯಂತ್ರಿಸುವ ಕ್ರಮದ ಭಾಗವಾಗಿ, ಇಡೀ ಜಿಲ್ಲೆಯಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಪ್ರಚೋದನಾಕಾರಿ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಜೂ.13ರವರೆಗೂ ಇಲ್ಲಿ ಇಂಟರ್‌ನೆಟ್ ಸೌಲಭ್ಯ ಮರುಸ್ಥಾಪನೆಯಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಷ್ಟೇ ಅಲ್ಲ, ಹೌರಾಹ್‌ನ ಪಂಚಾಲ್, ಜಗತ್‌ಬಲ್ಲವಪುರ ಸೇರಿ ಹಲವು ಪ್ರದೇಶಗಳಲ್ಲಿ ಜೂ.15ರ ಮುಂಜಾನೆ ಆರುಗಂಟೆಯವರೆಗೂ ಸೆಕ್ಷನ್ 144 ಜಾರಿಯಲ್ಲಿ ಇರಲಿದೆ.
ಇದನ್ನೂ ಓದಿ: ಕೇಸರಿ ಪಡೆ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿ: ಬಿಜೆಪಿಯೇತರ ಸಿಎಂಗಳಿಗೆ ದೀದಿ ಪತ್ರ
ಬಿಜೆಪಿಯೇ ಹೊಣೆಯೆಂದ ದೀದಿ !
ದೇಶದಲ್ಲಿ ಯಾವುದೇ ಕಾರಣಕ್ಕೆ, ಯಾವ ಭಾಗದಲ್ಲಿಯೇ ಹಿಂಸಾಚಾರ, ಗಲಭೆ, ಪ್ರತಿಭಟನೆಗಳು ನಡೆದರೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೊಟ್ಟಮೊದಲು ವಾಗ್ದಾಳಿ ನಡೆಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ. ಒಟ್ಟಾರೆ ಬಿಜೆಪಿ ಪಕ್ಷದ ವಿರುದ್ಧ. ಹಾಗೇ, ಈ ಹಿಂಸಾಚಾರಕ್ಕೂ ಬಿಜೆಪಿಯೇ ಸಂಪೂರ್ಣ ಹೊಣೆ ಎಂದು ದೀದಿ ಟ್ವೀಟ್ ಮಾಡಿದ್ದಾರೆ. ʼಕಳೆದ ಎರಡು ದಿನಗಳಿಂದ ಹೌರಾಹ್‌ದಲ್ಲಿ ಉದ್ವಿಗ್ನತೆ ಇದೆ. ಜನಸಾಮಾನ್ಯರ ಜೀವನ ಅಸ್ತವ್ಯಸ್ತಗೊಂಡಿದೆ. ಈ ದಾಂಧಲೆಯ ಹಿಂದೆ ಕೆಲವು ರಾಜಕೀಯ ಪಕ್ಷಗಳ ಕೈವಾಡ ಖಂಡಿತವಾಗಿಯೂ ಇದೆ. ಇದನ್ನು ಹಿಂದೆಯೂ ನಾನು ಹೇಳಿದ್ದೇನೆ. ನಾವಿದನ್ನು ಖಂಡಿತ ಸಹಿಸಿಕೊಳ್ಳುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿ ಮಾಡಿದ ಪಾಪಕ್ಕೆ ಜನಸಾಮಾನ್ಯರು ಯಾಕೆ ಕಷ್ಟಪಡಬೇಕು?ʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ; ಪೊಲೀಸರತ್ತ ಆಕ್ರೋಶದಿಂದ ಕಲ್ಲು ಎಸೆದ ಮಕ್ಕಳು !
ಹೌರಾಹ್‌ಗೆ ಭೇಟಿ ನೀಡಿದ ಬಿಜೆಪಿ ನಾಯಕ
ಹೌರಾಹ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಪಶ್ಚಿಮ ಬಂಗಾಳ ಸಂಸದ ದಿಲೀಪ್ ಘೋಷ್ ಅಲ್ಲಿಗೆ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಮಾಧ್ಯಮಗಳ ವಿರುದ್ಧವೇ ಹರಿಹಾಯ್ದಿದ್ದಾರೆ. ʼಸಣ್ಣ ಗಲಾಟೆ ದೊಡ್ಡಮಟ್ಟದ ಗಲಭೆಯ ರೂಪ ಪಡೆಯಲು ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳೇ ಕಾರಣ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರಚೋದನಾಕಾರಿ ಹೇಳಿಕೆಗಳು, ಫೋಟೋಗಳಿಂದ ಹಿಂಸಾಚಾರ ಜಾಸ್ತಿಯಾಯಿತು. ಇನ್ನೊಂದೆಡೆ ಪೊಲೀಸರೂ ನಿರ್ಲಕ್ಷ್ಯ ವಹಿಸಿದರು. ತಮ್ಮ ಸ್ಟೇಶನ್‌ಗೆ, ಪ್ರಮುಖ ಕಚೇರಿಗಳಿಗೆ ಗಲಭೆಕೋರರು ನುಗ್ಗಿದ್ದನ್ನು ನೋಡಿಯೂ ಮೌನವಾಗಿದ್ದರು ಎಂದೂ ಆರೋಪಿಸಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ಬಂಧನ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆ, ಬೆಳಗಾವಿಯಲ್ಲಿ ಪ್ರತಿಕೃತಿಗೆ ಗಲ್ಲು