ಫರಿದಾಬಾದ್: ಹಿಂದೂ ದೇವತೆಗಳ ಬಗ್ಗೆ ಅವಹೇಳನ ಮಾಡಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡು ಸಾಮರಸ್ಯಕ್ಕೆ ಭಂಗ (Haryana Violence) ತಂದಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಸಾಜಿದ್ ಬಂಧಿತ ಆರೋಪಿಯಾಗಿದ್ದಾನೆ. ಈತನ ಮೇಲೆ ಧಾರ್ಮಿಕ ಭಾವನೆಗಳಿಗೆ ಪ್ರಚೋದನೆ, ಸಾಮಾಜಿಕ ಸಾಮರಸ್ಯಕ್ಕೆ ಭಂಗ ಮತ್ತು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ವಕ್ತಾರ ಸುಬೆ ಸಿಂಗ್ ತಿಳಿಸಿದ್ದಾರೆ.
ಆರೋಪಿ ಸಾಜಿದ್ ಕಳೆದ ಮೂರು ವರ್ಷಗಳಿಂದ ಹರಿಯಾಣದ ಫರಿದಾಬಾದ್ ಜಿಲ್ಲೆಯ ಎನ್ಐಟಿ-ಫರಿದಾಬಾದ್ ಪ್ರದೇಶದಲ್ಲಿ ಸಲೂನ್ ನಡೆಸುತ್ತಿದ್ದಾನೆ. ಅಲ್ಲಿಯೇ ವಾಸಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯು ಫೇಸ್ಬುಕ್ನಲ್ಲಿ ಶೇರ್ ಮಾಡಿರುವ ವಿಡಿಯೊದಲ್ಲಿ ಹಿಂದೂ ದೇವತೆಗಳ ಬಗ್ಗೆ ಅಸಭ್ಯ ಭಾಷೆಯನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Manipur Violence: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸೆ, ಮೂವರ ಸಾವು
ಸರನ್ ಪೊಲೀಸ್ ಠಾಣೆಯಲ್ಲಿ ಸಾಜಿದ್ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ . ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಅದೇ ರೀತಿ ಇತರ ಇಬ್ಬರು ಆರೋಪಿಗಳನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಫರಿದಾಬಾದ್ ಪೊಲೀಸರು ಸಾಜಿದ್ ಅವರನ್ನು ಉತ್ತರ ಪ್ರದೇಶದ ಬಿರ್ಜೋನ್ನಿಂದ ಬಂಧಿಸಿದ್ದಾರೆ. ಇದೇ ವೇಳೆ ಪೊಲೀಸರು ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸುವ ಯಾವುದೇ ರೀತಿಯ ಹೇಳಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹರಿಯಾಣದಲ್ಲಿ ಮತ್ತೆ ಬುಲ್ಡೋಜರ್ ಸದ್ದು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ʼಬುಲ್ಡೋಜರ್ ನ್ಯಾಯʼ (Bulldozer Justice) ಪದ್ಧತಿಯನ್ನು ಮಧ್ಯಪ್ರದೇಶದ ಬಳಿಕ ಹರಿಯಾಣವೂ ಅಳವಡಿಸಿಕೊಂಡಿದೆ. ಹರಿಯಾಣದ ನುಹ್ ಜಿಲ್ಲೆಯಲ್ಲಿ (Nuh Violence) ಹಿಂಸಾಚಾರಕ್ಕೆ ಕಾರಣರಾದವರ ಮನೆ, ಅಂಗಡಿಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಶನಿವಾರವೂ (August 5) ಮುಂದುವರಿದಿದ್ದು, 45 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆಯೇ ನುಹ್ ನಗರದ ನಲ್ಹಾರ್ ರಸ್ತೆ ಬಳಿಯ ಎಸ್‌ಕೆಎಚ್‌ಎಂ ಸರ್ಕಾರಿ ಮೆಡಿಕಲ್ ಕಾಲೇಜ್ ಸುತ್ತಮುತ್ತಲಿನ 24ಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಸೇರಿ 45 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. “ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನುಹ್ ಜಿಲ್ಲಯ ತೌರ್‌ನಲ್ಲಿ ನಡೆದ ಕೋಮುಗಲಭೆಯಲ್ಲಿ ಇವರು ಭಾಗಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ” ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಶ್ವನಿ ಕುಮಾರ್ ತಿಳಿಸಿದ್ದಾರೆ.
ಬುಲ್ಡೋಜರ್‌ಗಳ ಅಬ್ಬರ
“ನುಹ್ ಜಿಲ್ಲೆಯಲಲಿ ಸುಮಾರು 2.5 ಎಕರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿದ್ದಾರೆ. ಹೀಗೆ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿದವರು ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಾಗಿ, ಶನಿವಾರ ಬೆಳಗ್ಗೆ 45 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.