Site icon Vistara News

ಬಾಲ್ಯದ ಕನಸಿಗೆ ಗಾಲಿ ಕಟ್ಟಿದ ಅರ್ಚಕ : ಮನೆಯಲ್ಲೇ ಚುಟುಕು ರೈಲು ಮಾದರಿ ಸೃಷ್ಟಿ !

Prabhas Acharya

ಕೋಲ್ಕತ್ತ: ಮಕ್ಕಳಿದ್ದಾಗ ಏನೇನೆಲ್ಲಾ ಕನಸುಗಳಿರುತ್ತವಲ್ಲ, ರಾಕೆಟ್‌ ಅಥವಾ ವಿಮಾನ ಹಾರಿಸಬೇಕು. ಹಡಗಿನಲ್ಲಿ ಭೂಮಿ ಸುತ್ತಬೇಕು… ಹೀಗೆಲ್ಲ. ಅವುಗಳಲ್ಲಿ ಹೆಚ್ಚಿನವುಗಳು ಎಂದೂ ನಿಜವಾಗುವುದಿಲ್ಲ. ಪಶ್ಚಿಮ ಬಂಗಾಳದ ಸೆರಂಪೋರ್ ನಿವಾಸಿ ಪ್ರಭಾಸ್‌ ಆಚಾರ್ಯ ಅವರಿಗೂ ಬಾಲ್ಯದಲ್ಲಿ ಒಂದು ಕನಸಿತ್ತು… ರೈಲು ಓಡಿಸಬೇಕೆಂದು. ಹುಡುಗ ಹೀಗೆ ʻರೈಲು ಬಿಡುತ್ತಾನೆಂದುʼ ಮನೆಯವರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಈ ಬಗ್ಗೆ ಗಮನ ಹರಿಸುವಷ್ಟು ಆರ್ಥಿಕ ಅನುಕೂಲವೂ ಕುಟುಂಬಕ್ಕೆ ಇರಲಿಲ್ಲವೆನ್ನಿ. ಹಾಗಾಗಿ ಹೆಚ್ಚಿನ ವ್ಯಾಸಂಗವೂ ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ತಮ್ಮ ಬಾಲ್ಯದ ಕನಸನ್ನು ನಡುವಯಸ್ಸಿನಲ್ಲಿ ಪ್ರಭಾಸ್‌ ಅವರು ನನಸಾಗಿಸಿಕೊಂಡಿದ್ದಾರೆ, ಮನೆಯಲ್ಲೇ ರೈಲು ಓಡಿಸುವ ಮೂಲಕ!

ಮನೆಲ್ಲಿ ರೈಲು…?: ಹೌದು, ಪೂರ್ವ ರೈಲ್ವೆ ವಿಭಾಗದ ಉಗಿಬಂಡಿಗಳ ಚುಟುಕು ಮಾದರಿಯೊಂದನ್ನು ತಮ್ಮ ಮನೆಯಲ್ಲಿ ಇವರು ಸೃಷ್ಟಿಸಿಕೊಂಡಿದ್ದಾರೆ. ಯಾವ ರೈಲು ಎಲ್ಲಿಗೆ ಹೋಗುತ್ತದೆ, ಎಲ್ಲಿ ನಿಲ್ಲುತ್ತದೆ ಇತ್ಯಾದಿಗಳೆಲ್ಲವನ್ನೂ ಆಚಾರ್ಯರೇ ನಿರ್ವಹಿಸುತ್ತಿದ್ದಾರೆ. ಆ ಲೆಕ್ಕದಲ್ಲಿ ಕೇವಲ ಒಂದು ರೈಲಲ್ಲ, ಇಡೀ ಪೂರ್ವ ರೈಲ್ವೆಯ ಚುಟುಕು ಮಾದರಿಯ ಚಾಲನೆ, ನಿರ್ವಹಣೆ ಎಲ್ಲವೂ ಇವರದ್ದೇ. ಇಡೀ ಮಾದರಿಯನ್ನು ಸದೃಢವಾಗಿ ಸ್ಟೀಲ್‌ ಮತ್ತು ಕಬ್ಬಿಣದ ಗಾಲಿಗಳಿಂದ ತಯಾರಿಸಲಾಗಿದೆ.

ಈ ಮಾದರಿಯನ್ನು ಖರೀದಿಸುವುದಕ್ಕೆ ಈಗಾಗಲೇ ಕೆಲವರು ಆಸಕ್ತಿ ತೋರಿದ್ದಾರೆ. ಆದರೆ ಇಡೀ ಮಾದರಿಯನ್ನು, ದೊಡ್ಡ ಮಟ್ಟದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ತಯಾರಿಸುವಷ್ಟು ಆರ್ಥಿಕ ಹೂಡಿಕೆ ಆಚಾರ್ಯರಿಗೆ ಸಾಧ್ಯವಿಲ್ಲ. ಹಾಗಾಗಿ ಇದನ್ನು ಉದ್ದಿಮೆಯಾಗಿ ಪರಿವರ್ತಿಸುವುದಕ್ಕೆ ಯಾರಾದರೂ ಹೂಡಿಕೆದಾರರು ಬರಬಹುದೆನ್ನುವುದು ಅವರ ನಿರೀಕ್ಷೆ. ತಮ್ಮ ಮೂಲ ಕಸುಬಾದ ಪೌರೋಹಿತ್ಯದ ಜೊತೆಗೆ ಇದನ್ನೂ ಕೈಗೂಡಿಸಿಕೊಳ್ಳುವ ತವಕ ಅಚಾರ್ಯ ಅವರದ್ದು.

ಇದನ್ನೂ ಓದಿ: ಅಂದು ಜಸ್ಟ್‌ ಪಾಸ್‌, ಇಂದು ಐಎಎಸ್:‌ ಭರೂಚ್‌ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಸ್ಫೂರ್ತಿದಾಯಕ ಕಥೆ

Exit mobile version