Site icon Vistara News

ಎರಡು ನಾಯಿಮರಿಗಳ ಬಾಲ-ಕಿವಿಗಳನ್ನು ಕತ್ತರಿಸಿ, ಅದಕ್ಕೆ ಉಪ್ಪು ಹಾಕಿಕೊಂಡು ಚಪ್ಪರಿಸಿ ತಿಂದ ಕುಡುಕ!

Drunk man

ಬರೇಲಿ: ಕುಡಿತಕ್ಕೆ ದಾಸರಾದವರು ಮದ್ಯ ಹೊಟ್ಟೆಗೆ ಹೋದಾಗ ಏನೇನು ಅವಾಂತರಗಳನ್ನು, ಕ್ರೌರ್ಯಗಳನ್ನು ಮಾಡುತ್ತಾರೆ ಎಂಬುದನ್ನು ನಾವು ಹೊಸದಾಗಿ ಹೇಳಬೇಕಿಲ್ಲ. ಕುಡಿದ ಮತ್ತಿನಲ್ಲಿ ಹಾವು ಹಿಡಿದು ಓಡಾಡಿದವರು, ಹಾವಿಗೇ ಕಚ್ಚಿದವರು, ಚರಂಡಿಯಲ್ಲಿ ಮಲಗಿ ದಿನ ಕಳೆದವರು…ಯಾರನ್ನೋ ಕೊಲೆ ಮಾಡಿದವರ ಬಗ್ಗೆ ಕೇಳಿದ್ದೇವೆ. ಆದರೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಒಬ್ಬಾತ ಕಂಠಪೂರ್ತಿ ಕುಡಿದು ಎರಡು ನಾಯಿಮರಿಗಳ ಕಿವಿಗಳು ಮತ್ತು ಬಾಲಗಳನ್ನು ಕತ್ತರಿಸಿ, ಅದಕ್ಕೆ ಉಪ್ಪು ಮತ್ತು ಮದ್ಯವನ್ನು ನೆಂಚಿಕೊಂಡು ತಿಂದಿದ್ದಾನೆ.

ಬರೇಲಿಯ ಫರಿದಾಪುರ ಏರಿಯಾದಲ್ಲಿರುವ ಎಸ್​ಡಿಎಂ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಎರಡು ನಾಯಿಮರಿಗಳನ್ನು ಹಿಡಿದುಕೊಂಡು ಬಂದ ಕುಡುಕ, ಒಂದು ಮರಿಯ ಕಿವಿಗಳನ್ನು ಮತ್ತು ಇನ್ನೊಂದು ಮರಿಯ ಬಾಲಗಳನ್ನು ಕತ್ತರಿಸಿದ್ದಾನೆ. ಆ ಎರಡೂ ನಾಯಿಮರಿಗಳು ರಕ್ತಸ್ರಾವದಿಂದ ಅಸ್ವಸ್ಥವಾಗಿದ್ದವು. ಅವುಗಳನ್ನು ಪಶು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಆದರೆ ನಾಯಿಮರಿಗಳು ಬದುಕುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ.

ಕುಡುಕನ ಹೆಸರು ಮುಕೇಶ್ ವಾಲ್ಮೀಕಿ ಎಂದಾಗಿದ್ದು, ಇವನೇ ನಾಯಿಮರಿಗಳ ಕಿವಿ-ಬಾಲ ಕತ್ತರಿಸಿದವನು. ಈ ಹೊತ್ತಲ್ಲಿ ಇವನೊಂದಿಗೆ ಇನ್ನೊಬ್ಬನೂ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರ ಕೃತ್ಯ ನೋಡಿದ ಪೀಪಲ್​ ಫಾರ್​ ಎನಿಮಲ್ಸ್​ ಸಂಸ್ಥೆಯ ಸದಸ್ಯ ಧೀರಜ್​ ಪಾಠಕ್​ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಈ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬರೇಲಿ ಎಸ್​​ಪಿ ಅಖಿಲೇಶ್​ ಚೌರಾಸಿಯಾ ತಿಳಿಸಿದ್ದಾರೆ.

Exit mobile version