ನವ ದೆಹಲಿ: ರಾಷ್ಟ್ರಿಯ ಹೆದ್ದಾರಿ 48ರ ದೆಹಲಿ-ಜೈಪುರ ಸಾಗಣೆ ಮಾರ್ಗದಲ್ಲಿ ರಸ್ತೆ ದಾಟುತ್ತಿದ್ದ 35 ವರ್ಷದ ಯುವಕನಿಗೆ ಭೀಕರ ಅಪಘಾತವಾಗದೆ. ಗುರುವಾರ ನಸುಕಿನಲ್ಲಿ ಈತ ರಸ್ತೆ ದಾಟುತ್ತಿದ್ದ. ಅದೇ ಸಮಯದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಆತ ನೆಲದ ಮೇಲೆ ಬಿದ್ದಿದ್ದಾನೆ. ಹೀಗೆ ಕೆಳಗೆ ಬಿದ್ದ ಅವನ ಮೈಮೇಲೆ ಹಲವು ವಾಹನಗಳು ಹರಿದ ಪರಿಣಾಮ ದೇಹ ಛಿದ್ರಗೊಂಡಿದೆ. ಯುವಕನಿಗೆ ಅಪಘಾತವಾಗುವಾಗ ಮುಂಜಾನೆಯ ಕತ್ತಲಿತ್ತು. ಅಪಘಾತಕ್ಕೀಡಾಗಿ ಕೆಳಗೆ ಬಿದ್ದ ಅವನ ದೇಹ, ಹಿಂದೆ ಬರುತ್ತಿದ್ದ ವಾಹನ ಸವಾರರಿಗೆ ಕಾಣಿಸದೆ ಇದ್ದುದರಿಂದ ಹಲವು ವಾಹನಗಳು ಅವನ ಮೈಮೇಲೆ ಹತ್ತಿ, ಮುಂದೆ ಹೋಗಿವೆ.
ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಬಂದಾಗ ಅವರಿಗೆ ಮೊದಲು ಆತನ ಗುರುತು ಪತ್ತೆ ಮಾಡುವುದೇ ಕಷ್ಟವಾಯಿತು. ಕಾರಣ ಆ ದೇಹ ಅಷ್ಟೊಂದು ಜಜ್ಜರಿತಗೊಂಡಿತ್ತು. ಅಪಘಾತ ಸ್ಥಳದಿಂದ 100 ಮೀಟರ್ವರೆಗೆ ಆತನ ದೇಹದ ಅಂಗಗಳು ಚೆಲ್ಲಾಪಿಲ್ಲಿಯಾಗಿ ಹರಡಿಬಿದ್ದಿದ್ದವು.
ಬಳಿಕ ಆತನ ಹೆಸರು ರಮೇಶ್ ನಾಯಕ್ ಎಂದು ಗೊತ್ತಾಗಿದೆ. ಈತ ಮೂಲತಃ ದೆಹಲಿಯ ದ್ವಾರಕಾದಲ್ಲಿರುವ ಮೋಹನ್ ಗಾರ್ಡನ್ ನಿವಾಸಿಯಾಗಿದ್ದಾನೆ. ಶಾಲಾ ಬಸ್ವೊಂದರ ಚಾಲಕನವಾಗಿ ಕೆಲಸ ಮಾಡುತ್ತಿದ್ದ. ಬುಧವಾರ ರಾತ್ರಿ ದೆಹಲಿಯ ತನ್ನ ಮನೆಯಿಂದ ರಾಜಸ್ಥಾನದ ಜೈಪುರದಲ್ಲಿ ಇರುವ ತಂಗಿಯ ಮನೆಗೆ ಬಸ್ ಮೂಲಕ ಹೋಗುತ್ತಿದ್ದ. ಆದರೆ ಮಾರ್ಗಮಧ್ಯೆಯಲ್ಲಿ ತಾನು ಅಸ್ವಸ್ಥನಾದಂತೆ ಅನ್ನಿಸಿ, ಮನೆಗೆ ಫೋನ್ ಮಾಡಿದ್ದ. ‘ಜೈಪುರಕ್ಕೆ ಹೋಗುವುದಿಲ್ಲ. ಆರೋಗ್ಯದಲ್ಲಿ ಏರುಪೇರಾಗಿದೆ ಹಾಗಾಗಿ ಮನೆಗೆ ಬರುತ್ತಿದ್ದೇನೆ ಎಂದು ಮನೆಯವರಿಗೆ ಹೇಳಿದ್ದ’. ಅದರಂತೆ ಗುರುವಾರ ಮುಂಜಾನೆ 4.15ರ ಹೊತ್ತಿಗೆ ಬಸ್ ಇಳಿದು, ಹೈವೇ ದಾಟುತ್ತಿದ್ದ. ದೆಹಲಿಗೆ ಹೋಗಲು ವಾಹನ ಸಿಗಬೇಕು ಎಂದರೆ ರಸ್ತೆಯ ಇನ್ನೊಂದು ಬದಿಗೆ ಹೋಗಬೇಕಾಗಿದ್ದರಿಂದ ಅವನು ಅತ್ತ ಹೋಗುತ್ತಿದ್ದ. ಆಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಇದನ್ನೂ ಓದಿ: ಚಾಲಕ ಕುಡಿದಿದ್ದರೂ, ಅಪಘಾತದಲ್ಲಿ ಸಂತ್ರಸ್ತರಾದ ಉಳಿದವರಿಗೆ ಪರಿಹಾರ ಕೊಡುವುದು ವಿಮಾ ಕಂಪನಿಗಳ ಹೊಣೆ: ಕೇರಳ ಹೈಕೋರ್ಟ್
ಅಪಘಾತ ಆಗಿರುವುದನ್ನು ನೋಡಿದರೆ ಮೊದಲು ಆತನಿಗೆ ಯಾವುದೋ ಬಸ್ ಅಥವಾ ಟ್ರಕ್ ಡಿಕ್ಕಿ ಹೊಡೆದಿರುವಂತೆ ಅನ್ನಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಮೊಬೈಲ್ ಕೂಡ ಚೂರುಚೂರಾಗಿದೆ. ಬಳಿಕ ಪರ್ಸ್ ನೋಡಿದಾಗ ಅದರಲ್ಲೊಂದು ಮೊಬೈಲ್ ನಂಬರ್ ಬರೆದುಕೊಂಡಿದ್ದ ಚೀಟಿ ಕಂಡಿತು. ನಾವು ಆ ನಂಬರ್ಗೆ ಕರೆ ಮಾಡಿದಾಗ ಅದು ಅವರ ಮನೆಯದ್ದೇ ಆಗಿತ್ತು. ನಾವು ವಿಷಯ ತಿಳಿಸಿದೆವು. ಬಳಿಕ ಮನೆಯವರೇ ನಮಗೆ ಈತನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಎಂದು ಪೊಲೀಸರು ಹೇಳಿದ್ದಾರೆ.