ನಾಗ್ಪುರ: ಮದ್ಯಪಾನ ಮಾಡುತ್ತ, ವಯಾಗ್ರ ಮಾತ್ರೆ (Viagra Pills)ಗಳನ್ನು ಸೇವಿಸಿದ 41 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಅಪರೂಪದ ಪ್ರಕರಣ ಮಹಾರಾಷ್ಟ್ರದ ನಾಗ್ಪುರದಲ್ಲಿ ವರದಿಯಾಗಿದೆ. ಮದ್ಯದೊಂದಿಗೆ 2 50 ಎಂಜಿಯ ಸಿಲ್ಡೆನಫಿಲ್ (ವಯಾಗ್ರ)ಮಾತ್ರೆಗಳನ್ನು ತೆಗೆದುಕೊಂಡು, ವ್ಯಕ್ತಿ ಮೃತಪಟ್ಟ ಬಗ್ಗೆ ಫೋರೆನ್ಸಿಕ್ ಮತ್ತು ಲೀಗಲ್ ಮೆಡಿಸಿನ್ನ ಜರ್ನಲ್ನಲ್ಲಿ ಕೂಡ ಒಂದು ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.
ಈ 41 ವರ್ಷದ ವ್ಯಕ್ತಿ ತನ್ನ ಸ್ನೇಹಿತೆಯೊಂದಿಗೆ ನಾಗ್ಪುರದ ಹೋಟೆಲ್ಗೆ ಹೋಗಿ ತಂಗಿದ್ದ. ಆತ ಮದ್ಯಪಾನ ಮಾಡುತ್ತ, 50ಎಂಜಿಯ 2 ಸಿಲ್ಡೆನ್ಫಿಲ್ (ವಯಾಗ್ರ ಬ್ರ್ಯಾಂಡ್) ಮಾತ್ರೆಗಳನ್ನು ನುಂಗಿದ್ದ. ಮರುದಿನ ಬೆಳಗ್ಗೆ ಎದ್ದವನು ಅಸ್ವಸ್ಥನಾಗಿದ್ದ. ಅವನಿಗೆ ವಾಂತಿ ಕೂಡ ಪ್ರಾರಂಭವಾಯಿತು. ಅದನ್ನು ನೋಡಿ ಹೆದರಿದ ಅವನ ಸ್ನೇಹಿತೆ, ವೈದ್ಯರ ಬಳಿ ಹೋಗೋಣ ಎಂದಳು. ಆದರೆ ಅವನು ಅದನ್ನು ಒಪ್ಪಲಿಲ್ಲ. ಬೇಡ, ನನಗೆ ಈ ಹಿಂದೆಯೂ ಒಮ್ಮೆ ಹೀಗೆ ಆಗಿತ್ತು ಎಂದು ಹೇಳಿದ. ಆದರೆ ಬರುಬರುತ್ತ ಅವನು ತೀವ್ರ ಅಸ್ವಸ್ಥನಾದ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಿ ಮೃತಪಟ್ಟಿದ್ದ. ಮೆದುಳಿಗೆ ಆಮ್ಲಜನಕದ ಪೂರೈಕೆಯಾಗದೆ, ರಕ್ತಸ್ರಾವವಾಗಿ (ಬ್ರೇನ್ ಹೆಮರೇಜ್) ಆಗಿ ಆತನ ಉಸಿರುನಿಂತಿದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: Russia Rape War | ಉಕ್ರೇನ್‌ನಲ್ಲಿರುವ ತನ್ನ ಸೈನಿಕರಿಗೆ ವಯಾಗ್ರ ನೀಡಿದ ರಷ್ಯಾ, ಅತ್ಯಾಚಾರಕ್ಕೆ ಪ್ರಚೋದನೆ!
ಮೃತದೇಹವನ್ನು ಪೋಸ್ಟ್ಮಾರ್ಟಮ್ ಮಾಡಿದಾಗ, ಮಿದುಳಿನಲ್ಲಿ 300 ಗ್ರಾಂಗಳಷ್ಟು ರಕ್ತಹೆಪ್ಪುಗಟ್ಟಿದ್ದು ಪತ್ತೆಯಾಗಿದೆ. ಈ ಮೊದಲೇ ಆತನಿಗೆ ಇದ್ದ ರಕ್ತದೊತ್ತಡ, ಮಾತ್ರೆ ಮತ್ತು ಮದ್ಯದ ಮಿಶ್ರಣದಿಂದಾಗಿಯೇ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಂದಹಾಗೇ, ವಯಾಗ್ರ ಸೇರಿ, ಯಾವುದೇ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು. ಹೀಗೆ ಮಾತ್ರೆ-ಮದ್ಯದ ಮಿಶ್ರಣ ಸೇವನೆ ಒಳ್ಳೆಯದಲ್ಲ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಲೇಖನ ಪ್ರಕಟಿಸಿದ್ದಾಗಿ ಜರ್ನಲ್ ತಿಳಿಸಿದೆ.