ಪಶ್ಚಿಮ ಬಂಗಾಳದ ಮಾಲ್ಡಾದ ಮುಚ್ಚಿಯ ಅಂಚಲ್ ಚಂದ್ರ ಮೋಹನ್ ಹೈಸ್ಕೂಲ್ಗೆ ಬುಧವಾರ ನುಗ್ಗಿದ್ದ ವ್ಯಕ್ತಿಯೊಬ್ಬ ಅಲ್ಲಿನ 8ನೇ ತರಗತಿಯ ಸುಮಾರು 80 ಮಕ್ಕಳನ್ನು ಮತ್ತು ಅವರ ಶಿಕ್ಷಕರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಭೀತಿ ಸೃಷ್ಟಿಸಿದ್ದ. ಆತನ ಕೈಯಲ್ಲಿ 9ಎಂಎಂ ಪಿಸ್ತೂಲ್ ಮತ್ತು ಎರಡು ಬಾಟಲಿ ಆ್ಯಸಿಡ್ ಇತ್ತು. ಅಷ್ಟು ಸಾಲದೆಂಬಂತೆ ಒಂದು ಚಾಕುವನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡಿದ್ದ. ದೊಡ್ಡದಾಗಿ ಕಿರುಚಾಡುತ್ತಿದ್ದ. ಸುಮಾರು ಒಂದು ತಾಸು ಆತ ಮಕ್ಕಳು ಮತ್ತು ಶಿಕ್ಷಕರನ್ನು ಹೀಗೇ ಗೋಳಾಡಿಸಿದ್ದಾನೆ. ಬಳಿಕ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ. ಅದರಲ್ಲೂ ಡಿಎಸ್ಪಿ ಅಜರುದ್ದೀನ್ ಖಾನ್ ಎಂಬ ಪೊಲೀಸ್ ಅಧಿಕಾರಿ, ಕೈಯಲ್ಲಿ ಏನೇನೂ ಶಸ್ತ್ರ ಹಿಡಿದುಕೊಳ್ಳದೆ, ತಮ್ಮ ಸಮವಸ್ತ್ರ ಬಿಚ್ಚಿಟ್ಟು, ಸಾಮಾನ್ಯ ಉಡುಪು ಧರಿಸಿ ಕ್ಲಾಸ್ ರೂಮ್ ಒಳಗೆ ಹೋಗಿ, ಆ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ.
ಆ ವ್ಯಕ್ತಿ ಹೆಸರು ದೇಬ್ ಕುಮಾರ್ ಬಲ್ಲವ್ (44). ತನ್ನ ಪತ್ನಿ ಮತ್ತು ಮಗ ಕಾಣೆಯಾಗಿ ಒಂದು ವರ್ಷದ ಮೇಲಾಯಿತು. ಹುಡುಕಿಕೊಡುವಂತೆ ಪೊಲೀಸರಿಗೆ ದೂರು ಕೊಟ್ಟರೂ, ಇನ್ನೂ ಹುಡುಕಿಲ್ಲ. ಹೀಗಾಗಿ ಅವರ ಮೇಲೆ ಒತ್ತಡ ಹೇರುವ ಸಲುವಾಗಿ ಶಾಲೆಗೆ ಬಂದು ಮಕ್ಕಳನ್ನು, ಶಿಕ್ಷಕರನ್ನೂ ಒತ್ತೆಯಾಳಾಗಿಟ್ಟುಕೊಂಡಿದ್ದೇನೆ ಎಂದು ಆತ ಪೊಲೀಸರ ಎದುರು ಹೇಳಿಕೊಂಡಿದ್ದಾನೆ. ದೇಬ್ ಕುಮಾರ್ ಶಾಲೆಗೆ ಬಂದು ಉದ್ವಿಗ್ನತೆ ಸೃಷ್ಟಿಸುತ್ತಿದ್ದಂತೆ ಪಾಲಕರು ಆತಂಕದಿಂದ ಇಲ್ಲಿಗೆ ಓಡಿಬಂದಿದ್ದರು. ‘ಯಾರಾದರೂ ಒಳಗೆ ಬಂದರೆ, ನನಗೆ ಶೂಟ್ ಮಾಡಲು ಯತ್ನಿಸಿದರೆ, ಮಕ್ಕಳನ್ನು ಕೊಲ್ಲುತ್ತೇನೆ’ ಎಂದು ಆತ ಒಂದೇ ಸಮನೆ ಅರಚುತ್ತಿದ್ದ. ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಉಲ್ಲೇಖಿಸಿ ನಿರಂತರವಾಗಿ ಬಯ್ಯುತ್ತಿದ್ದ. ಆದರೆ ಅಲ್ಲಿಗೆ ಆಗಮಿಸಿದ್ದ ಮಾಧ್ಯಮ ಸಿಬ್ಬಂದಿ ಜತೆ ಚೆನ್ನಾಗಿಯೇ ಮಾತನಾಡುತ್ತಿದ್ದ. ಅವರನ್ನು ಸಮೀಪ ಬಿಟ್ಟುಕೊಳ್ಳುತ್ತಿದ್ದ. ಆ ಕ್ಷಣ ಡಿಎಸ್ಪಿ ಅಜರುದ್ದೀನ್ ಖಾನ್ ಅತ್ಯಂತ ಚಾಕಚಕ್ಯತೆಯಿಂದ ಐಡಿಯಾವೊಂದನ್ನು ಮಾಡಿದ್ದಾರೆ.
ಕೂಡಲೇ ತಮ್ಮ ಸಮವಸ್ತ್ರ ತೆಗೆದು, ಸಾಮಾನ್ಯ ಉಡುಪು ಧರಿಸಿದರು. ತಾವೂ ಮಾಧ್ಯಮ ಸಿಬ್ಬಂದಿಯೊಂದಿಗೆ ಸೇರಿ, ದೇಬ್ ಕುಮಾರ್ ಹತ್ತಿರ ಹೋಗಿ ಒಂದು ಏಟು ಬಲವಾಗಿ ಹೊಡೆದಿದ್ದಾರೆ. ಆ ಕ್ಷಣ ಆತನಿಗೆ ಏನಾಯಿತು ಎಂದು ಅರ್ಥವಾಗಲಿಲ್ಲ. ಆತ ಚೇತರಿಸಿಕೊಳ್ಳುವ ಮೊದಲೇ ಕುತ್ತಿಗೆಗೆ ಕೈಹಾಕಿ, ಒತ್ತಿ ಹಿಡಿದು ನೆಲಕ್ಕೆ ಕೆಡವಿದ್ದಾರೆ. ಆ ಕ್ಷಣದಲ್ಲೇ ವಿದ್ಯಾರ್ಥಿಗಳು, ಶಿಕ್ಷಕರೆಲ್ಲ ಲಗುಬಗೆಯಿಂದ ಶಾಲಾ ಕೋಣೆಯಿಂದ ಹೊರಗೆ ಓಡಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಂದಹಾಗೇ, ಈ ಅಜರುದ್ದೀನ್ ಖಾನ್ ಇತ್ತೀಚೆಗೆಷ್ಟೇ ಮಾಲ್ಡಾಕ್ಕೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಎಸ್ಪಿ ಆಗಿ ವರ್ಗಾವಣೆಗೊಂಡಿದ್ದರು. ಮಕ್ಕಳನ್ನು ಒತ್ತೆಯಾಳಾಗಿಟ್ಟವನನ್ನು ಸೆರೆಹಿಡಿಯಲು ಸಮಯಪ್ರಜ್ಞೆ ತೋರಿದ ಡಿಎಸ್ಪಿಯನ್ನು ಸಿಎಂ ಮಮತಾ ಬ್ಯಾನರ್ಜಿ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಮರ ಪ್ರದೇಶಗಳಲ್ಲಿ ರಾಮನವಮಿ ಮೆರವಣಿಗೆಯೇ ತಪ್ಪು; ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ
ದೆಹಲಿಯ ಪಿತೂರಿ ಎಂದ ಸಿಎಂ ಮಮತಾ!
ಈ ಘಟನೆಗೆ ಸಿಎಂ ಮಮತಾ ಬ್ಯಾನರ್ಜಿ ದೆಹಲಿ ಕೇಂದ್ರ ಸರ್ಕಾರವನ್ನು ಹೊಣೆ ಮಾಡಿದ್ದಾರೆ. ವ್ಯಕ್ತಿಯೊಬ್ಬ ಶಾಲೆಗೆ ನುಗ್ಗಿ, ಮಕ್ಕಳನ್ನು -ಶಿಕ್ಷಕರನ್ನು ಒತ್ತೆಯಾಳಾಗಿಟ್ಟುಕೊಳ್ಳುವಂತೆ ಮಾಡಿದ್ದರಲ್ಲಿ ದೆಹಲಿ ಕೇಂದ್ರ ಸರ್ಕಾರದ ಕೈವಾಡವಿದೆ ಎಂದಿದ್ದಾರೆ. ‘ನಿಖರವಾಗಿ ಯಾರೆಲ್ಲ ಸೇರಿ ಸಂಚು ರೂಪಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಎ ಟು ಝಡ್ ದೆಹಲಿಯ ಕೈ ಇದೆ ಎಂಬುದು ನನಗೆ ಗೊತ್ತಿದೆ. ಕೇಂದ್ರದ ವಿರುದ್ಧ ಮಾತನಾಡುವ ಯಾವುದೇ ಪ್ರತಿಪಕ್ಷಗಳನ್ನು ಹೆದರಿಸಲು ಅವರು ಏನು ಬೇಕಾದರೂ ಮಾಡುತ್ತಾರೆ. ನನ್ನನ್ನು ಪ್ರಾರಂಭದಿಂದಲೂ ಟಾರ್ಗೆಟ್ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.