ಶ್ರೀನಗರ: ಒಂದು ತುಂಡು ಭೂಮಿಗಾಗಿ ಅಮ್ಮನ ಶಿರವನ್ನೇ ಕತ್ತರಿಸಿದ್ದ ಕಟುಕ ಮಗನಿಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಜಮ್ಮು-ಕಾಶ್ಮೀರದ ಉಧಾಮ್ಪುರದಲ್ಲಿ 2014ರಲ್ಲಿ ಘಟನೆ ನಡೆದಿತ್ತು. ಕೇಸ್ ವಿಚಾರಣೆ ನಡೆಸಿದ್ದ ಉಧಾಮ್ಪುರ ಪ್ರಿನ್ಸಿಪಾಲ್ ಸೆಷನ್ಸ್ ಜಡ್ಜ್ ಹಕ್ ನವಾಜ್ ಜರ್ಗರ್ ಇಂದು ತೀರ್ಪು ನೀಡಿದ್ದಾರೆ. ‘ಅಪರಾಧಿಯು ಅಮ್ಮನನ್ನು ಹತ್ಯೆ ಮಾಡಲು ಪೂರ್ವಸಿದ್ಧತೆ ಮಾಡಿಕೊಂಡಿದ್ದು ಸಾಬೀತಾಗಿದೆ. ತನ್ನನ್ನು ಹೆತ್ತ ಅಮ್ಮನನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ. ಮೊದಲು ಅವರ ಕುತ್ತಿಗೆ ಮೇಲೆ ಕುಡುಗೋಲಿನಿಂದ ಹೊಡೆದಿದ್ದಾನೆ. ಬಳಿಕ ಅವರ ತಲೆಯನ್ನು ಕೊಡಲಿಯಿಂದ ಕತ್ತರಿಸಿದ್ದಾನೆ. ಇದು ಅಮಾನವೀಯ ಮತ್ತು ಆಘಾತಕಾರಿ’ ಎಂದು ನ್ಯಾಯಾಧೀಶರು ತೀರ್ಪು ನೀಡುವಾಗ ಉಲ್ಲೇಖ ಮಾಡಿದ್ದಾರೆ.
ಅಪರಾಧಿ ಹೆಸರು ಜೀತ್ ಸಿಂಗ್ ಎಂದಾಗಿದ್ದು, ಉಧಾಮ್ಪುರದ ರಸ್ಸೇನ್ ಗ್ರಾಮದ ನಿವಾಸಿ. ಈತ ತನ್ನ ತಾಯಿ ವೈಷ್ಣೋದೇವಿ ಹೆಸರಿನಲ್ಲಿದ್ದ ಭೂಮಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಪ್ರಯತ್ನಿಸಿದ್ದ. ಆಕೆ ಒಪ್ಪದೆ ಇದ್ದಿದ್ದಕ್ಕೆ 2014ರ ಡಿಸೆಂಬರ್ 7ರಂದು ಅವರ ಮೇಲೆ ಹಲ್ಲೆ ನಡೆಸಿ, ದಾರುಣವಾಗಿ ಶಿರಚ್ಛೇದ ಮಾಡಿದ್ದ. ಅಷ್ಟೇ ಅಲ್ಲ, ವೈಷ್ಣೋದೇವಿಯವರನ್ನು ರಕ್ಷಿಸಲು ಬಂದ ಅವರ ಸೊಸೆ, ಅಂದರೆ ತನ್ನ ಪತ್ನಿ ಸಂತೋಷ್ ದೇವಿ ಮೇಲೆ ಕೂಡ ಹಲ್ಲೆ ಮಾಡಿದ್ದ.
ಇದನ್ನೂ ಓದಿ: Footbridge Collapse: ಕಾಶ್ಮೀರದಲ್ಲಿ ಬೈಸಾಕಿ ಹಬ್ಬದ ದಿನವೇ ದುರಂತ; ಸೇತುವೆ ಕುಸಿದು 80 ಜನಕ್ಕೆ ಗಾಯ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೀತ್ ಸಿಂಗ್ ವಿರುದ್ಧ ಕೋರ್ಟ್ನಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದರು. ಈಗ 9ವರ್ಷಗಳ ಬಳಿಕ ಆ ಕೇಸ್ನ ತೀರ್ಪು ಹೊರಬಿದ್ದಿದೆ. ‘ಅಪರಾಧಿ ತನ್ನ ತಾಯಿಯ ಬಳಿ ಇದ್ದ 2 ಕನಲ್ ಭೂಮಿಯನ್ನು ಕೊಡುವಂತೆ ಪೀಡಿಸುತ್ತಿದ್ದ. ಅಷ್ಟಲ್ಲದೆ, ನೀನು ನನ್ನೊಂದಿಗೆ ಇರಬೇಡ, ನಿನ್ನ ಇನ್ನೊಬ್ಬ ಮಗ ಮುಕುಲ್ ರಾಜ್ ಮನೆಗೆ ಹೋಗು ಎಂದು ಒತ್ತಡ ತರುತ್ತಿದ್ದ. ಆಕೆ ಕೇಳದೆ ಇದ್ದಾಗ ಹೀಗೆ ಹಲ್ಲೆ ಮಾಡಿದ್ದು ದೃಢಪಟ್ಟಿದೆ. ತಾಯಿಗೆ ಧಾರ್ಮಿಕ ನೆಲೆಯಲ್ಲಿ ಉನ್ನತ ಸ್ಥಾನವನ್ನು ಕೊಟ್ಟ ನಮ್ಮ ಸಮಾಜವನ್ನೇ ಆಘಾತಕ್ಕೀಡುಮಾಡುವ ಕ್ರೈಂ ಇದು’ ಎಂದು ನ್ಯಾಯಾಧೀಶರು ತೀರ್ಪು ಓದುವಾ ಹೇಳಿದ್ದಾರೆ.