ಛತ್ತೀಸ್ಗಢ್ನ ಕಬೀರ್ಧಾಮ್ ಜಿಲ್ಲೆಯಲ್ಲಿ, ಹೋಮ್ ಥಿಯೇಟರ್ ಸ್ಫೋಟಗೊಂಡು ಮದುಮಗ ಮತ್ತು ಆತನ ಸಹೋದರ ಮೃತಪಟ್ಟ ಘಟನೆಗೆ ಈಗೊಂದು ಟ್ವಿಸ್ಟ್ ಸಿಕ್ಕಿದೆ. ವಧುವಿನ ಮಾಜಿ ಪ್ರಿಯತಮನೇ ಈ ಕೃತ್ಯ ಮಾಡಿದ್ದು ಎಂಬುದು ಬೆಳಕಿಗೆ ಬಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಏಪ್ರಿಲ್ 1ರಂದು ಕಬೀರ್ಧಾಮ್ ಜಿಲ್ಲೆಯ ರೇಂಗಾಖರ್ ಗ್ರಾಮದಲ್ಲಿ ಹೇಮೇಂದ್ರ ಮಾರಾವಿ ಎಂಬುವನ ವಿವಾಹವಾಗಿತ್ತು. ಅವನಿಗೆ ಹೋಮ್ ಥಿಯೇಟರ್ವೊಂದು ಉಡುಗೊರೆಯಾಗಿ ಬಂದಿತ್ತು. ಮದುವೆಯೆಲ್ಲ ಮುಗಿದ ಮೇಲೆ, ಆ ಹೋಮ್ ಥಿಯೇಟರ್ನ್ನು ಸೆಟ್ ಮಾಡಲು ಮುಂದಾಗಿದ್ದಾರೆ. ಎಲೆಕ್ಟ್ರಿಕ್ ಬ್ಯಾಂಡ್ನ ಪ್ಲಗ್ಗೆ ಆ ಹೋಮ್ ಥಿಯೇಟರ್ನ ವೈಯರ್ ಚುಚ್ಚಿ, ಸ್ವಿಚ್ ಆನ್ ಮಾಡುತ್ತಿದ್ದಂತೆ ಅದು ಸ್ಫೋಟಗೊಂಡಿತ್ತು. ಇದರಲ್ಲಿ ಮದುಮಗ ಹೇಮೇಂದ್ರ ಮಾರಾವಿ ಮತ್ತು ಸಹೋದರ ಮೃತಪಟ್ಟಿದ್ದರೆ, ಒಂದೂವರೆ ವರ್ಷದ ಮಗು ಸೇರಿ ಒಟ್ಟು ಏಳುಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಅದೆಷ್ಟು ರಭಸವಾಗಿ ಸ್ಫೋಟಗೊಂಡಿತ್ತು ಅಂದರೆ, ಆ ಹೋಮ್ ಥಿಯೇಟರ್ ಇಟ್ಟಿದ್ದ ಕೋಣೆಯ ಮೇಲ್ಛಾವಣೆ, ಗೋಡೆಗಳೆಲ್ಲ ಕುಸಿದುಬಿದ್ದಿದ್ದವು. ಮದುಮಗ ಹೇಮೇಂದ್ರ ಮಾರಾವಿ ಅಲ್ಲೇ ಸ್ಥಳದಲ್ಲೇ ಮೃತಪಟ್ಟಿದ್ದರೆ, ಆತನ ಸಹೋದರ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಕೇಸ್ ದಾಖಲಿಸಿಕೊಂಡ ಪೊಲೀಸರು, ತನಿಖೆ ಶುರು ಮಾಡಿಕೊಂಡಿದ್ದರು. ಹೋಮ್ ಥಿಯೇಟರ್ನೊಳಗೆ ಯಾರೋ ಸ್ಫೋಟಕವನ್ನು ಉದ್ದೇಶಪೂರ್ವಕವಾಗಿ ಇಟ್ಟಿದ್ದು ಸಾಬೀತಾಗಿತ್ತು. ಬಳಿಕ ಪೊಲೀಸರು ಮದುವೆ ದಿನ ಬಂದ ಉಡುಗೊರೆಗಳ ಪಟ್ಟಿ ಮಾಡಿ, ಅದರ ಆಧಾರದ ಮೇಲೆ ತನಿಖೆ ನಡೆಸಿದಾಗಲೇ ಗೊತ್ತಾಯಿತು, ‘ವಧುವಿನ ಮಾಜಿ ಪ್ರಿಯತಮನೇ ಈ ಹೋಮ್ ಥಿಯೇಟರ್ನ್ನು ಉಡುಗೊರೆ ಕೊಟ್ಟಿದ್ದ ಮತ್ತು ಅದರಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ-IED) ಇಟ್ಟಿದ್ದ’ ಎಂಬುದು.
ಇದನ್ನೂ ಓದಿ: ಮದುವೆಗೆ ಉಡುಗೊರೆ ಬಂದಿದ್ದ ಹೋಮ್ ಥಿಯೇಟರ್ ಸ್ಫೋಟಗೊಂಡು ಮದುಮಗ ಸೇರಿ ಇಬ್ಬರ ಸಾವು
ಆರೋಪಿ ಹೆಸರು ಸರ್ಜು ಎಂದಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ‘ನನ್ನ ಪ್ರಿಯತಮೆಯಾಗಿದ್ದವಳು, ನನ್ನನ್ನು ಬಿಟ್ಟು ಹೋಗಿದ್ದಳು. ಈಗ ಇನ್ಯಾರನ್ನೋ ಮದುವೆಯಾಗಲು ಹೊರಟಿದ್ದು ಸಿಟ್ಟು ತಂದಿತ್ತು. ಹೀಗಾಗಿ ಹೋಮ್ ಥಿಯೇಟರ್ನೊಳಗೆ ಸ್ಫೋಟಕ ಇಟ್ಟು ಕೊಟ್ಟಿದ್ದೆ’ ಎಂದು ಸರ್ಜು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.