ಗಾಂಧಿನಗರ: ದೇಶದಲ್ಲಿ ಗಂಭೀರ ಪ್ರಕರಣಗಳ ಜತೆಗೆ ಕೆಲವು ಕ್ಷುಲ್ಲಕ ಪ್ರಕರಣಗಳು ಕೂಡ ಕೋರ್ಟ್ ಮೆಟ್ಟಿಲೇರುತ್ತವೆ. ಅದರಲ್ಲೂ, ಕೆಲವು ಪ್ರೇಮ ಪ್ರಕರಣಗಳು ಕೋರ್ಟ್‌ನ ಸಮಯವನ್ನೇ ಹಾಳು ಮಾಡುತ್ತವೆ. ಹೀಗೆ, ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯನ್ನು ಗಂಡನಿಂದ ಬಿಡಿಸಿ, ನನ್ನ ಸುಪರ್ದಿಗೆ ಕೊಡಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾನೆ. ಕೊನೆಗೆ ನ್ಯಾಯಾಲಯವು ಅರ್ಜಿ ಹಾಕಿದ ವ್ಯಕ್ತಿಗೆ 5 ಸಾವಿರ ರೂ. ದಂಡ ವಿಧಿಸಿದೆ.
ಗುಜರಾತ್‌ನ ಬನಾಸ್ಕಾಂತ ಜಿಲ್ಲೆಯ ವ್ಯಕ್ತಿಯೊಬ್ಬ ಗುಜರಾತ್ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾನೆ. “ನಾನು ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದೆ. ಆದರೆ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬನ ಜತೆ ಮದುವೆ ಮಾಡಿದ್ದಾರೆ. ಬದುವೆಯಾದ ಬಳಿಕ ಅವರಿಬ್ಬರೂ ಚೆನ್ನಾಗಿ ಸಂಸಾರ ಮಾಡಲಿಲ್ಲ. ಇದಾದ ನಂತರ ನಾನು ಪ್ರೀತಿಸುತ್ತಿದ್ದ ಯುವತಿಯು ನನ್ನ ಬಳಿ ಬಂದು ಇದ್ದಳು. ಇದೇ ವೇಳೆ ಜತೆಗಿರುವ ಕುರಿತು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ, ಈಗ ಆಕೆಯು ತನ್ನ ಗಂಡನ ಜತೆ ಅಕ್ರಮವಾಗಿ ವಾಸಿಸುತ್ತಿದ್ದಾಳೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
“ನನ್ನ ಪ್ರೇಯಸಿಯು ಗಂಡನ ಜತೆ ಅಕ್ರಮವಾಗಿ ವಾಸಿಸುತ್ತಿದ್ದಾಳೆ. ಆಕೆಗೆ ಗಂಡನ ಜತೆ ಇರಲು ಇಷ್ಟವಿಲ್ಲ. ಆಕೆಯ ಗಂಡನ ಸಂಬಂಧಿಕರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಹಾಗಾಗಿ, ನನ್ನ ಪ್ರೇಯಸಿಯನ್ನು ಆಕೆಯ ಗಂಡನಿಂದ ಬಿಡಿಸಿಕೊಡಿ” ಎಂದು ಮನವಿ ಮಾಡಿದ್ದಾನೆ. ಆದರೆ, ನ್ಯಾಯಾಲಯವು ಅರ್ಜಿ ತಿರಸ್ಕರಿಸಿ, ಈತನಿಗೆ ದಂಡ ವಿಧಿಸಿದೆ.
ಅರ್ಜಿದಾರನ ವಿರುದ್ಧ ರಾಜ್ಯ ಸರ್ಕಾರ ವಾದ
ಗಂಡನಿಂದ ತನ್ನ ಮಾಜಿ ಪ್ರೇಯಸಿಯನ್ನು ಬಿಡಿಸಿಕೊಡಿ ಎಂದ ವ್ಯಕ್ತಿಯ ವಿರುದ್ಧ ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ವಾದ ಮಂಡಿಸಿತು. “ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವ ಕುರಿತು ಅರ್ಜಿದಾರನು ಲೋಕಸ್ ಸ್ಟಾಂಡಿ (ಪ್ರಶ್ನಿಸುವ ಅಧಿಕಾರ) ಹೊಂದಿಲ್ಲ. ಗಂಡನ ಜತೆ ಹೆಂಡತಿ ಇರುವುದು ಅಕ್ರಮವಲ್ಲ. ಹಾಗಾಗಿ, ಆತ ಸಲ್ಲಿಸಿರುವ ಅರ್ಜಿಯಲ್ಲಿ ಹುರುಳಿಲ್ಲ” ಎಂದು ಕೋರ್ಟ್‌ಗೆ ತಿಳಿಸಿತು.
ಕೊನೆಗೆ ಕೋರ್ಟ್ ಹೇಳಿದ್ದೇನು?
ಪ್ರಕರಣದ ಕುರಿತು ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿ.ಎಂ.ಪಾಂಚೋಲಿ ಹಾಗೂ ಎಚ್.ಎಂ.ಪ್ರಾಚ್ಚಕ್ ಅವರಿದ್ದ ನ್ಯಾಯಪೀಠವು, ಅರ್ಜಿಯನ್ನು ತಿರಸ್ಕರಿಸಿದ್ದಲ್ಲದೆ, ಅರ್ಜಿದಾರನಿಗೆ ದಂಡ ವಿಧಿಸಿತು. “ಅರ್ಜಿ ಸಲ್ಲಿಸಿದ ವ್ಯಕ್ತಿ ಹಾಗೂ ಯುವತಿಯು ಮದುವೆಯಾಗಿಲ್ಲ. ಮತ್ತೊಂದೆಡೆ, ಯುವತಿಯು ತನ್ನ ಗಂಡನಿಗೆ ವಿಚ್ಛೇದನ ನೀಡಿಲ್ಲ. ಹಾಗಾಗಿ, ಲಿವ್-ಇನ್ ರಿಲೇಷನ್‌ಶಿಪ್ ಅಗ್ರಿಮೆಂಟ್ ಆಧಾರದ ಮೇಲೆ ಮದುವೆಯಾದ ಯುವತಿಯನ್ನು ಅರ್ಜಿದಾರನ ಸುಪರ್ದಿಗೆ ನೀಡಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ: Viral Video : ಐದು ವರ್ಷದ ಬಾಲಕನೇ ಪೊಲೀಸರಿಗೆ ಮುಖ್ಯಸ್ಥ! ವೈರಲ್ ಆಯ್ತು ಈ ವಿಶೇಷ ವಿಡಿಯೊ