ಅನೇಕರು ಕೋಪ-ಹತಾಶೆಗೆ ಒಳಗಾದಾಗ ತಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ತಾವೇನು ಮಾಡ್ತಿದ್ದೇವೆ ಎಂಬ ಪರಿವೆಯೇ ಇಲ್ಲದಂತೆ ವರ್ತಿಸುತ್ತಾರೆ. ಹಾಗೇ, ಇಲ್ಲೊಬ್ಬ 51ವರ್ಷದ ವ್ಯಕ್ತಿ ತನ್ನ ಪರ್ಸ್ ಕಳೆದುಕೊಂಡು, ಅದನ್ನು ಹುಡುಕಾಡಿ ಸೋತಿದ್ದಾರೆ. ಎಷ್ಟೆಲ್ಲ ಹುಡುಕಿದರೂ ಪರ್ಸ್ ಸಿಗದೆ ಇದ್ದಾಗ ಹತಾಶೆ-ಕೋಪಗೊಂಡ ಅವರು ಎರಡು ಬೈಕ್ಗಳಿಗೆ ಬೆಂಕಿ ಹಚ್ಚಿ, ಈಗ ಪೊಲೀಸ್ ಕಸ್ಟಡಿ ಸೇರಿದ್ದಾರೆ.
ಮಧುರವಾಯಲ್ ಎಂಬಲ್ಲಿ ಘಟನೆ ನಡೆದಿದೆ. ಇಲ್ಲಿನ ವಿಜಿಪಿ ಅಮುಧಾ ನಗರದಲ್ಲಿರುವ ಪಿಳ್ಳೈಯಾರ್ ಕೋಯಿಲ್ ರಸ್ತೆಯಲ್ಲಿ ಬುಧವಾರ ಮೊದಲು ದೊಡ್ಡ ಶಬ್ದ ಕೇಳಿಸಿತು. ಅದನ್ನು ಕೇಳಿದ ಹಲವರು ಸ್ಥಳದಲ್ಲಿ ಜಮಾಯಿಸಿದರು. ಬಾಗಿಲು ಹಾಕಿಕೊಂಡು ಮನೆಯೊಳಗೆ ಇದ್ದವರೂ ಬಂದು ಇಣುಕಿದರು. ನೋಡಿದೆ ಅರೆಬರೆ ವೃದ್ಧನೊಬ್ಬ ರಸ್ತೆಯಲ್ಲಿ ಗಲಾಟೆ ಶುರುವಿಟ್ಟುಕೊಂಡಿದ್ದರು. ಅವರು ಸ್ಥಳೀಯನೇ ಮತ್ತು ಅವರ ಹೆಸರು ಎಸ್.ರಾಮಚಂದ್ರನ್ ಎಂದು ಅಲ್ಲಿನ ಹಲವರಿಗೆ ಗೊತ್ತಿತ್ತು. ಏನಾಯ್ತು ಎಂದು ಕೇಳಿದ್ದಕ್ಕೆ, ನಾನು ಇಲ್ಲೇ ಎಲ್ಲೋ ನನ್ನ ವಾಚ್ ಮತ್ತು ಪರ್ಸ್ ಕಳೆದುಕೊಂಡಿದ್ದೇನೆ. ಅದನ್ನು ಹುಡುಕುತ್ತಿದ್ದೇನೆ ಎಂದಷ್ಟೇ ಅವರು ಹೇಳಿದ್ದಾರೆ.
ಇದನ್ನೂ ಓದಿ: Child theft : 600 ಸಿಸಿ ಟಿವಿ ಚೆಕ್ ಮಾಡಿದಾಗ ಆ ಮಕ್ಕಳ ಕಳ್ಳಿ ಸಿಕ್ಕಿಬಿದ್ದಳು; ಅವಳ ಹಿಂದೆ ಕೂಡಾ ಒಂದು ಕಣ್ಣೀರ ಕಥೆ ಇತ್ತು!
ಕ್ರಮೇಣ ಅಲ್ಲಿ ನೆರೆದಿದ್ದವರೆಲ್ಲ ವಾಪಸ್ ಹೊರಡಲು ಶುರು ಮಾಡಿದರು. ಆದರೆ ಕೆಲ ಹೊತ್ತಲ್ಲಿ ರಾಮಚಂದ್ರನ್ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದ್ದಾರೆ. ಅಲ್ಲೇ ಪಾರ್ಕಿಂಗ್ ಏರಿಯಾದಲ್ಲಿದ್ದ ಎರಡು ಬೈಕ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿ ಮತ್ತಷ್ಟು ವಾಹನಗಳಿಗೆ ತಗುಲಿ ಅವೆಲ್ಲವೂ ಹಾನಿಗೊಳಗಾಗಿವೆ. ಅಲ್ಲೆಲ್ಲ ದಟ್ಟನೆಯ ಹೊಗೆ ಆವರಿಸಿ, ಆಕಾಶದೆತ್ತರಕ್ಕೆ ಪಸರಿಸಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರೆಲ್ಲ ಬಂದು ಬೆಂಕಿಯನ್ನು ನಂದಿಸಿದ್ದಾರೆ ಮತ್ತು ಎಸ್.ರಾಮಚಂದ್ರನ್ರನ್ನು ಬಂಧಿಸಿದ್ದಾರೆ.
ವಾಹನ ಕಳೆದುಕೊಂಡವರು ರಾಮಚಂದ್ರನ್ ವಿರುದ್ಧ ದೂರು ದಾಖಲು ಮಾಡಿದ್ದು, ಕೊಯಂಬೇಡು ಠಾಣೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ‘ನಾನು ನನ್ನ ಪರ್ಸ್ ಮತ್ತು ವಾಚ್ನ್ನು ಇದೇ ಏರಿಯಾದಲ್ಲಿ ಕಳೆದುಕೊಂಡೆ. ಎಲ್ಲ ಕಡೆ ಹುಡುಕಿದೆ, ನನ್ನ ಅಕ್ಕಪಕ್ಕದ ಮನೆಯವರನ್ನೆಲ್ಲ ಕೇಳಿದೆ. ಎಷ್ಟು ಹುಡುಕಿದರೂ ಸಿಗದೆ, ಹತಾಶೆಯಿಂದ ಹೀಗೆ ಮಾಡಿದೆ. ವಾಹನಗಳ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದೆ’ ಎಂದು ಪೊಲೀಸರ ಎದುರು ರಾಮಚಂದ್ರನ್ ಒಪ್ಪಿಕೊಂಡಿದ್ದಾರೆ.