ಮುಂಬಯಿ: ಈ ಭೂಮಿ ಮೇಲೆ ಎಂತೆಂಥಾ ಚಾಲಾಕಿಗಳು ಇರ್ತಾರೆ ಅಂತ ನೋಡಿ. ಇಲ್ಲೊಬ್ಬ ಪೊಲೀಸರಿಂದ ಪಾರಾಗಲು, ತನ್ನ ಬೈಕ್ನ್ನು ತಾನೇ ಕದ್ದು ಸುದ್ದಿ ಮಾಡಿದ್ದಾನೆ. ಪೊಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ವಿಧಿಸುತ್ತಾರೆ. ಸುಮ್ಮನೆ ಹಿಡಿದುಕೊಂಡು ವಿಚಾರಣೆ ಮಾಡುತ್ತಾರೆ. ಆ ರಗಳೆಗಳೇ ಬೇಡವೆಂದು ಖತರ್ನಾಕ್ ಐಡಿಯಾ ಮಾಡಿದ್ದಾನೆ.
ಮುಂಬಯಿಯ ಗೋವಂಡಿಯಲ್ಲಿರುವ ಬೈಗನವಾಡಿ ನಿವಾಸಿ, 24ವರ್ಷದ ತಾರಿಕ್ ಅಹ್ಮದ್ ಮಕ್ಸೂದ್ ಖಾನ್ ಎಂಬಾತ ಆಜಾದ್ ಮೈದಾನ್ ಟ್ರಾಫಿಕ್ ಚೌಕಿ ಬಳಿ, ಪೊಲೀಸರ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಬೈಕ್ ನಿಲ್ಲಿಸಿ ಅಲ್ಲೆ ಎಲ್ಲಿಗೋ ಹೋಗಿದ್ದ. ಆದರೆ ವಾಪಸ್ ಬರುವಷ್ಟರಲ್ಲಿ ಬೈಕ್ ಇರಲಿಲ್ಲ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕೆ, ಪೊಲೀಸರು ಅವನ ಬೈಕ್ನ್ನು ಟೋಯಿಂಗ್ ಮಾಡಿ, ಆಜಾದ್ ಮೈದಾನ್ ಠಾಣೆಗೆ ತೆಗೆದುಕೊಂಡುಬಂದಿಟ್ಟಿದ್ದರು.
ಇದನ್ನೂ ಓದಿ: BMW Bike : ಬಿಎಮ್ಡಬ್ಲ್ಯು ಕಂಪನಿಯ ಈ ಬೈಕ್ಗೆ 35 ಲಕ್ಷ ರೂಪಾಯಿ; ಯಾಕೆ ಅಷ್ಟು ಬೆಲೆ?
ಅದು ಗೊತ್ತಾದ ತಾರಿಕ್ ಒಂದು ಐಡಿಯಾ ಮಾಡಿದ. ಈ ಹಿಂದೆಯೂ ಹಲವು ದಂಡಗಳು ಬಾಕಿ ಇದ್ದವು. ಈಗ ಸಿಕ್ಕಿಕೊಂಡರೆ ಹಿಂದಿನ ದಂಡದ ಮೊತ್ತ, ಈಗಿನದೆಲ್ಲ ಪಾವತಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ರಾತ್ರಿ ಪೊಲೀಸರು ತನ್ನ ಬೈಕ್ ಇಟ್ಟಿದ್ದ ಜಾಗಕ್ಕೆ ಹೋಗಿ ಕದ್ದುಕೊಂಡು ಬಂದಿದ್ದಾನೆ. ಬೈಕ್ನ್ನು ಪೊಲೀಸರು ಸರಪಳಿಯಿಂದ ಕಟ್ಟಿಟ್ಟಿದ್ದರು. ಅದನ್ನು ಕಟ್ ಮಾಡಿಕೊಂಡು ತೆಗೆದುಕೊಂಡು ಬಂದಿದ್ದಾನೆ. ಮರುದಿನ ಪೊಲೀಸರು ಅಲ್ಲಿ ಚೆಕ್ ಮಾಡಿದಾಗ, ಆ ಚೈನ್ ಕಟ್ ಆಗಿ ಬಿದ್ದಿದ್ದಿತ್ತು. ಕೂಡಲೇ ಸಿಸಿಟಿವಿ ಫೂಟೇಜ್ ಪರಿಶೀಲನೆ ಮಾಡಿದ ಪೊಲೀಸರಿಗೆ ಇದು ತಾರಿಕ್ ಅಹ್ಮದ್ ಮಕ್ಸೂದ್ ಖಾನ್ನದೇ ಕೆಲಸ ಎಂದು ಗೊತ್ತಾಗಿ, ಅವನನ್ನು ಹಿಡಿದು ವಿಚಾರಣೆ ಮಾಡಿದ್ದಾರೆ. ಆಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ದಂಡ ತುಂಬುವುದನ್ನು ತಪ್ಪಿಸಿಕೊಳ್ಳಲು ಹೀಗೆ ಮಾಡಿದೆ ಎಂದಿದ್ದಾನೆ.