ನವ ದೆಹಲಿ: ಭಾರತದಲ್ಲೀಗ ನಾಲ್ಕನೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ಈ ಬಾರಿ ದೆಹಲಿಯಲ್ಲಿ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದಿನ ಮೂರು ಮಂಕಿಪಾಕ್ಸ್ ಕೇಸ್‌ಗಳು ಕೇರಳದಲ್ಲೇ ಪತ್ತೆಯಾಗಿದ್ದವು ಮತ್ತು ಆ ಮೂವರೂ ವಿದೇಶಗಳಿಂದ ವಾಪಸ್ ಬಂದವರಾಗಿದ್ದರು. ಆದರೆ ಇದೀಗ ದೆಹಲಿಯ ಸೋಂಕಿತ ವಿದೇಶಕ್ಕೆ ಪ್ರಯಾಣಿಸಿದ್ದವರು ಅಲ್ಲ ಎಂದು ಹೇಳಲಾಗಿದ್ದು, ಇದು ತುಸು ಆತಂಕಕ್ಕೆ ಕಾರಣವಾಗಿದೆ.
ಇದೀಗ ಸೋಂಕು ತಗುಲಿದ್ದು 31 ವರ್ಷದ ವ್ಯಕ್ತಿಗಾಗಿದ್ದು ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದಲ್ಲಿ ನಡೆದ ಒಂದು ಬ್ಯಾಚುಲರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ. ಅಲ್ಲಿಂದ ಬಂದವನಲ್ಲಿ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಮೈಮೇಲೆಲ್ಲ ಕೆಂಪಾದ ಗುಳ್ಳೆಗಳು ಎದ್ದಿದ್ದವು. ಹೀಗಾಗಿ ಆತನ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ವೈರಲಾಜಿ ಇನ್‌ಸ್ಟಿಟ್ಯೂಟ್‌ಗೆ ಕಳಿಸಲಾಗಿತ್ತು. ಅದರ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ.
ಕಳೆದ ಮೂರು ಕೇಸ್‌ಗಳೂ ಕೇರಳದಲ್ಲೇ ಪತ್ತೆಯಾಗಿದ್ದವು. ಮಂಕಿಪಾಕ್ಸ್ ಸೋಂಕು ಮೊಟ್ಟಮೊದಲು ಭಾರತಕ್ಕೆ ಕಾಲಿಟ್ಟಿದ್ದು ಜುಲೈ 12ರಂದು. ಯುಎಇಯಿಂದ ಕೊಲ್ಲಂಗೆ ಬಂದಿದ್ದವನಲ್ಲಿ ಮಂಕಿಪಾಕ್ಸ್ ದೃಢಪಟ್ಟಿತ್ತು. ಹಾಗೇ, ಎರಡನೇ ವ್ಯಕ್ತಿ ದುಬೈನಿಂದ ಕೇರಳಕ್ಕೆ ಬಂದವರು. ಹಾಗೇ ಮೂರನೇ ರೋಗಿ ಕೂಡ ಯುಎಇಯಿಂದ ಕೇರಳಕ್ಕೆ ಬಂದವರೇ ಆಗಿದ್ದರು. ಇನ್ಯಾವುದೇ ರಾಜ್ಯದಲ್ಲಿ ಮಂಕಿಪಾಕ್ಸ್ ದಾಖಲಾಗಿರಲಿಲ್ಲ.
ಮೊದಲಿಗೆ ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್ ಇದೀಗ ಸುಮಾರು 75ರಾಷ್ಟ್ರಗಳಿಗೆ ವ್ಯಾಪಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಾಗೇ, ಮಂಕಿಪಾಕ್ಸ್ ಕಾಯಿಲೆಯನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಣೆ ಮಾಡಿದೆ. ನಿಯಂತ್ರಣಕ್ಕಾಗಿ ರಾಷ್ಟ್ರಗಳೆಲ್ಲ ಒಗ್ಗಟ್ಟಾಗಬೇಕು ಎಂದೂ ವಿಶ್ವಸಂಸ್ಥೆ ಕರೆ ಕೊಟ್ಟಿದೆ.
ಮಂಕಿಪಾಕ್ಸ್ ಲಕ್ಷಣಗಳೇನು?
1. ಜ್ವರ, ಆಯಾಸ, ತಲೆ ನೋವು, ಮಾಂಸ ಖಂಡಗಳಲ್ಲಿ ನೋವು, ಚಳಿ, ಬೆನ್ನು ನೋವು, ಗಂಟಲು ನೋವು, ಒಣ ಕೆಮ್ಮು, ಉಸಿರಾಟದ ತೊಂದರೆ.
2.ಮೈಮೇಲೆ ಸಣ್ಣ ಗುಳ್ಳೆಗಳು ಏಳುತ್ತವೆ. ಬಳಿಕ ಅದು ದೊಡ್ಡದಾಗಿ ಕೀವು ತುಂಬುತ್ತದೆ.
3.ಬಾಯಿಯ ಒಳಗೆ, ಕಣ್ಣಿನ ಒಳಭಾಗ, ಗುದದ್ವಾರಗಳಲ್ಲಿ ಈ ಗುಳ್ಳೆ, ದದ್ದು ಉಂಟಾಗುತ್ತದೆ.
ಹೇಗೆ ಹರಡುತ್ತದೆ?
ಮಂಕಿಪಾಕ್ಸ್ ರೋಗ ಒಬ್ಬರಿಂದ ಒಬ್ಬರಿಗೆ ಪ್ರಸರಣಗೊಳ್ಳುತ್ತದೆ. ಮಂಕಿಪಾಕ್ಸ್ ಸೋಂಕಿತ ಮನುಷ್ಯ ಅಥವಾ ಪ್ರಾಣಿಯ ಗಾಯದಿಂದ ಒಸರುವ ದ್ರವ ತಗುಲಿದರೆ, ಉಸಿರಾಟದ ಹನಿಗಳು, ಎಂಜಲು ಅಥವಾ ಸೋಂಕಿತ ಮಲಗಿದ್ದ ಜಾಗದಲ್ಲೇ ಇನ್ನೊಬ್ಬರು ಮಲಗಿದಾಗ ರೋಗ ಹರಡುತ್ತದೆ. ಸದ್ಯ ಭಾರತದಲ್ಲಿ ಕಾಣಿಸಿಕೊಂಡ ಮೂರೂ ಪ್ರಕರಣಗಳು ಕೇರಳದಲ್ಲೇ ದಾಖಲಾಗಿವೆ ಮತ್ತು ಈ ಮೂವರೂ ಹೊರದೇಶದಿಂದಲೇ ಬಂದವರಾಗಿದ್ದಾರೆ.
ಇದನ್ನೂ ಓದಿ: Monkeypox| ಮಂಕಿಪಾಕ್ಸ್ ತುರ್ತು ಜಾಗತಿಕ ಆರೋಗ್ಯ ಪರಿಸ್ಥಿತಿ ಘೋಷಿಸಿದ WHO