ಇಂದೋರ್: ರಾಹುಲ್ ಗಾಂಧಿಯವರನ್ನು ಬಾಂಬ್ ಸ್ಫೋಟಿಸಿ ಕೊಲ್ಲುವುದಾಗಿ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶ ಪೊಲೀಸರು ಉಜ್ಜಯನಿ ಜಿಲ್ಲೆಯ ನಾಗ್ಡಾ ಎಂಬಲ್ಲಿ ಬಂಧಿಸಿದ್ದಾರೆ. ಈತನನ್ನು ದಯಾ ಅಲಿಯಾಸ್ ನರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಪ್ಯಾರೆ ಎಂಬ ಹೆಸರೂ ಈತನಿಗೆ ಇದೆ ಎಂದು ಹೇಳಲಾಗಿದೆ.
ಭಾರತ್ ಜೋಡೋ ಯಾತ್ರೆ ನಿಮಿತ್ತ ಒಂದೊಂದೇ ರಾಜ್ಯದಲ್ಲಿ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿಗೆ ಕಳೆದ ವಾರದ ಹಿಂದೆ ಒಂದು ಬೆದರಿಕೆ ಪತ್ರ ಬಂದಿತ್ತು. ನೀವು ಮಧ್ಯಪ್ರದೇಶದ ಇಂದೋರ್ಗೆ ಕಾಲಿಡುತ್ತಿದ್ದಂತೆ ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಅದರಲ್ಲಿ ಒಕ್ಕಣೆ ಇತ್ತು. ಆ ಪತ್ರದ ಕುರಿತು ಮಧ್ಯಪ್ರದೇಶ ಪೊಲೀಸರು ತನಿಖೆ ನಡೆಸಿದ್ದರು. ಈ ನಿಮಿತ್ತ ಅವರು ಇಂದೋರ್ನ ವಿವಿಧ ನಗರಗಳ ಸುಮಾರು 200 ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದರು. ಅನೇಕ ಹೋಟೆಲ್, ಲಾಡ್ಜ್, ರೈಲ್ವೆ ಸ್ಟೇಶನ್ ಮೇಲೆ ರೇಡ್ ಮಾಡಿದ್ದರು.
ಇದೀಗ ಸಿಕ್ಕಿಬಿದ್ದಿರುವ ನರೇಂದ್ರ ಸಿಂಗ್ ಉತ್ತರ ಪ್ರದೇಶದ ರಾಯ್ ಬರೇಲಿಯವನಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಈತನಿಗೆ ಬೆದರಿಕೆ ಹಾಕುವುದೇ ಕೆಲಸವಾಗಿದೆ. ಈಗಾಗಲೇ ಹಲವು ಗಣ್ಯರಿಗೆ ಇವನು ಜೀವ ಬೆದರಿಕೆ ಹಾಕಿ ಪತ್ರ ಬರೆದಿದ್ದಾನೆ. ಅನೇಕರಿಗೆ ಕರೆ ಮಾಡಿ ಹೆದರಿಸುತ್ತಿದ್ದ. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಕಾಂಗ್ರೆಸ್ನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಎಂಬ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ. ಇನ್ನು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶವನ್ನು ಪ್ರವೇಶಿಸಿದೆ. ಇಲ್ಲಿ ಪ್ರಿಯಾಂಕಾ ಗಾಂಧಿ ಕೂಡ ಯಾತ್ರೆಗೆ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: Video | ಭಾರತ್ ಜೋಡೋ ಯಾತ್ರೆಯಲ್ಲಿ ಮೊಳಗಿದ ನೇಪಾಳ ರಾಷ್ಟ್ರಗೀತೆ; ಮುಖಮುಖ ನೋಡಿಕೊಂಡ ಕಾಂಗ್ರೆಸ್ ನಾಯಕರು!