ಮುಂಬಯಿ: ಈಗಂತೂ ರೀಲ್ಸ್ ನದ್ದೇ ಹಾವಳಿ. ಕೆಲವರಂತೂ ಸಿಕ್ಕಸಿಕ್ಕ ಜಾಗದಲ್ಲೆಲ್ಲ ರೀಲ್ಸ್ ಮಾಡುತ್ತಾರೆ. ಹೀಗೆ ರೀಲ್ಸ್ ಮಾಡುವುದು, ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ ಮಾಡಿ ವೀವ್ಸ್-ಲೈಕ್ಸ್-ಕಮೆಂಟ್ ಪಡೆಯುವುದು ಒಂದು ಗೀಳಾಗಿದೆ. ಈಗ 18 ವರ್ಷದ ಯುವಕನೊಬ್ಬ ಇನ್ಸ್ಟಾಗ್ರಾಂ ರೀಲ್ಸ್ (Instagram Reels) ಮಾಡಲು ಹೋಗಿ, ಆಳವಾದ ಬಾವಿಗೆ ಬಿದ್ದು ಸತ್ತುಹೋಗಿದ್ದಾನೆ. ಅದೂ ಕೂಡ ಬಾವಿಯಲ್ಲಿ ಸಿಲುಕಿ, 32 ತಾಸುಗಳ ಕಾಲ ಅಲ್ಲೇ ಒದ್ದಾಡಿ ಪ್ರಾಣಬಿಟ್ಟಿದ್ದಾನೆ.
ಬಿಲಾಲ್ ಸೋಹಿಲ್ ಶೇಖ್ ಎಂಬ ಯುವಕ, ತನ್ನಿಬ್ಬರು ಸ್ನೇಹಿತರೊಟ್ಟಿಗೆ ಠಾಕುರ್ಲಿಯ ಪಂಪ್ಹೌಸ್ ಬಳಿ ಹೋಗಿದ್ದ. ಈತ ಮುಂಬ್ರಾ ನಿವಾಸಿಯಾಗಿದ್ದು, ರೀಲ್ಸ್ ರೆಕಾರ್ಡ್ ಮಾಡುವ ಸಲುವಾಗಿಯೇ ಅಲ್ಲಿಗೆ ತೆರಳಿದ್ದರು. ಆದರೆ ರೀಲ್ಸ್ ಮಾಡುತ್ತಿದ್ದಾಗಲೇ ಬಿಲಾಲ್ ಸೋಹಿಲ್ ಶೇಖ್ ಆಯತಪ್ಪಿ ಅಲ್ಲಿಯೇ ಇದ್ದ ಬಾವಿಗೆ ಬಿದ್ದಿದ್ದಾನೆ. ಜತೆಗೆ ಇದ್ದ ಸ್ನೇಹಿತರು ಕೂಡಲೆ ಸಮೀಪದ ರೈಲ್ವೆ ಸ್ಟೇಶನ್ಗೆ ಬಂದು, ಅಲ್ಲಿದ್ದ ರೈಲ್ವೆ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ರೈಲ್ವೆ ಸೆಕ್ಯೂರಿಟಿ ಸಿಬ್ಬಂದಿ ತಕ್ಷಣವೇ ವಿಷ್ಣುನಗರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ತಡ ಮಾಡದೆ, ದೊಂಬಿವ್ಲಿ ಪಶ್ಚಿಮದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: Viral Post: ಸಾಮಾಜಿಕ ಜಾಲತಾಣದಲ್ಲಿ ಕೋಟಿಗಟ್ಟಲೆ ದುಡಿಯುವ ನಾಯಿಯಿದು!
ಬಾವಿಯ ಬಳಿ ಬಂದ ರಕ್ಷಣಾ ಪಡೆಗಳು ಬಿಲಾಲ್ ಸೋಹಿಲ್ನನ್ನು ಹೊರತೆಗೆಯಲು ಪ್ರಯತ್ನ ಪಟ್ಟಿವೆ. ಸ್ಥಳೀಯ ಅಧಿಕಾರಿಗಳೂ ಅಲ್ಲಿಗೆ ತೆರಳಿದ್ದರು. ಆ ಬಾವಿ ತುಂಬ ಆಳವಾಗಿತ್ತು. ಬಿಲಾಲ್ ಸೋಹಿಲ್ ಶೇಖ್ನನ್ನು ಪತ್ತೆ ಮಾಡಲು ಸಾಧ್ಯವೇ ಆಗಿರಲಿಲ್ಲ. ಸುಮಾರು 32 ತಾಸುಗಳ ಕಾರ್ಯಾಚರಣೆ ಬಳಿಕ ಬಿಲಾಲ್ ಸಿಕ್ಕಿದ್ದಾನೆ. ಆದರೆ ದುರದೃಷ್ಟಕ್ಕೆ ಅವನ ಶವ ಪತ್ತೆಯಾಗಿದೆ. ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ.