ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ವಿಧಾನಸಭಾ ಕ್ಷೇತ್ರ (Telangana Chief Minister K Chandrashekar Rao) ಗಜ್ವೆಲ್ನಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದವನಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದೆ. ಈ ವ್ಯಕ್ತಿ ಮದ್ಯದ ಅಮಲಿನಲ್ಲಿ, ರಸ್ತೆ ವಿಭಜಕದ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ (Urinating In Public Place). ಅಷ್ಟೇ ಹೊತ್ತಿಗೆ ‘ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ, ಛತ್ರಪತಿ ಶಿವಾಜಿ ಕೀ ಜೈ’ ಎಂದು ಘೋಷಣೆ ಕೂಗುತ್ತ ಬಂದ ಗುಂಪೊಂದು ಅವನಿಗೆ ಥಳಿಸಿದ್ದಲ್ಲದೆ, ಆತ ಮೂತ್ರ ವಿಸರ್ಜನೆ ಮಾಡಿದ ಜಾಗವನ್ನು ಅವನ ಕೈಯಿಂದಲೇ ಸ್ವಚ್ಛ ಮಾಡಿಸಿದೆ. ಈತ ಶಿವಾಜಿ ಪ್ರತಿಮೆ ಬಳಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಆ ಗುಂಪು ಪ್ರತಿಪಾದಿಸಿ, ಇದೇ ಕಾರಣಕ್ಕೆ ರೊಚ್ಚಿಗೆದ್ದಿದೆ.
ಆ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿ ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಈ ಗುಂಪು ಅಲ್ಲಿಗೆ ಬಂದಿದೆ. ನಾಲ್ಕು ಜನರು ಹೋಗಿ ನೀರು ತರುವಷ್ಟರಲ್ಲಿ, ಮತ್ತೊಂದಿಷ್ಟು ಮಂದಿ ಆ ವ್ಯಕ್ತಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದರು. ಜಾಗವನ್ನು ಸ್ವಚ್ಛಗೊಳಿಸಿಯಾದ ಬಳಿಕ ಆತನನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಅವನ ಬಟ್ಟೆಗಳನ್ನೂ ಹರಿಯಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ತಪ್ಪಿಗೆ ಅವನಿಗೆ ಅತ್ಯಂತ ಹೀನಾಯವಾಗಿ ಅವಮಾನ ಮಾಡಲಾಗಿದೆ.
ಇದನ್ನೂ ಓದಿ: ವಿಮಾನದಲ್ಲಿ ಕುಡುಕರ ಹಾವಳಿಗೆ ಇಲ್ಲ ಕಡಿವಾಣ!; ಮತ್ತೊಂದು ಮೂತ್ರ ವಿಸರ್ಜನೆ ಘಟನೆ, ಪ್ರಯಾಣಿಕ ದೆಹಲಿಯಲ್ಲಿ ಅರೆಸ್ಟ್
ಅದೆಷ್ಟರ ಮಟ್ಟಿಗೆ ಅವನನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ ಅಂದರೆ, ಆತನ ಮುಖವನ್ನು ನೆಲಕ್ಕೆ ಹಿಡಿದು ಉಜ್ಜಲಾಗಿದೆ. ಅಲ್ಲಿಗೆ ಬಂದ ಪೊಲೀಸರು ಗುಂಪಿನ ಹಿಡಿತದಿಂದ ವ್ಯಕ್ತಿಯನ್ನು ಬಿಡಿಸಲು ಹರಸಾಹಸಪಟ್ಟಿದ್ದಾರೆ. ಅಷ್ಟೇ ಅಲ್ಲ, ಮೂತ್ರ ಮಾಡಿದ ಜಾಗವನ್ನು ನೆಕ್ಕುವಂತೆ ಅವನಿಗೆ ಪೀಡಿಸಲಾಗಿದೆ. ಅಂತಿಮವಾಗಿ ವ್ಯಕ್ತಿಯನ್ನು ಪೊಲೀಸರು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಕೇಸ್ ದಾಖಲಿಸಿಕೊಂಡಿದ್ದಾರೆ.