ಏಪ್ರಿಲ್ 24ಕ್ಕೆ ಕೇರಳದ ಕೊಚ್ಚಿಗೆ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಭೇಟಿ ನೀಡಿದ್ದೇ ಆದಲ್ಲಿ, ಆತ್ಮಾಹುತಿ ಬಾಂಬ್ ದಾಳಿ (Kerala suicide bomb threat) ನಡೆಸುತ್ತೇನೆ ಎಂದು ಅಲ್ಲಿನ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಬೆದರಿಕೆ ಪತ್ರ ಕಳಿಸಿದ್ದವನನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ. ಆತನ ಹೆಸರು ಕ್ಸೇವಿಯರ್ ಎಂದಾಗಿದ್ದು, ಇವನು ಕೊಚ್ಚಿಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕ್ಸೇವಿಯರ್ ಪತ್ರದಲ್ಲಿ ತನ್ನ ಹೆಸರು ಬರೆದಿರಲಿಲ್ಲ. ಕಲೂರ್ ನಿವಾಸಿಯಾಗಿದ್ದ ಜೋಸೆಫ್ ಜಾನಿ ಎಂಬಾತನ ಹೆಸರು, ಫೋನ್ನಂಬರ್ ಮತ್ತು ವಿಳಾಸವನ್ನು ನಮೂದಿಸಿದ್ದ. ಮೊದಲು ಪೊಲೀಸರು ಈ ಜೋಸೆಫ್ನನ್ನೇ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಆತ ಈ ಕೇಸ್ನಲ್ಲಿ ಮುಗ್ಧ ಎಂಬುದು ಸ್ಪಷ್ಟವಾಗಿತ್ತು. ಇದೀಗ ಕ್ಸೇವಿಯರ್ನನ್ನು ಹಿಡಿದು ಪ್ರಶ್ನಿಸಿದಾಗ ‘ನನಗೆ ಜೋಸೆಫ್ನೊಟ್ಟಿಗೆ ವೈಯಕ್ತಿಕ ದ್ವೇಷ ಇತ್ತು. ಹೀಗಾಗಿ ಅವನನ್ನು ಕೇಸ್ನಲ್ಲಿ ಸಿಕ್ಕಿಸಲು ಪತ್ರ ಬರೆದು, ಅವನ ಹೆಸರು ಹಾಕಿದ್ದೆ’ ಎಂದು ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಪತ್ರ; ಕೇರಳದಲ್ಲಿ ಹೈಅಲರ್ಟ್!
ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 24ರಂದು ಕೊಚ್ಚಿಗೆ ಭೇಟಿ ಕೊಡಲಿದ್ದಾರೆ. ಅದೇ ದಿನ ಅವರು ತಿರುವನಂತಪುರಂನಲ್ಲಿ, ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ಕೊಡಲಿದ್ದಾರೆ. ಅಷ್ಟೇ ಅಲ್ಲ, ಅವರು ರೋಡ್ ಶೋ ನಡೆಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಕೇರಳ ರಾಜ್ಯ ಮುಖ್ಯಸ್ಥ ಕೆ.ಸುರೇಂದ್ರನ್ ತಿಳಿಸಿದ್ದರು. ಅದರ ಬೆನ್ನಲ್ಲೇ ಬಿಜೆಪಿ ಕಚೇರಿಗೆ ಬೆದರಿಕೆ ಪತ್ರ ಬಂದಿತ್ತು. ಆ ಪತ್ರವನ್ನು ಸುರೇಂದ್ರನ್ ಅವರು ಪೊಲೀಸರಿಗೆ ಕೊಟ್ಟು, ದೂರು ದಾಖಲಿಸಿದ್ದರು.