ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ಗೆ (National Herald Case) ಸಂಬಂಧಿಸಿ ರಾಹುಲ್ ಗಾಂಧಿಯನ್ನು ಇ.ಡಿ. ವಿಚಾರಣೆ ಮಾಡುತ್ತಿರುವುದನ್ನು ಕಾಂಗ್ರೆಸ್ ದೊಡ್ಡ ವಿಷಯನ್ನಾಗಿ ಮಾಡುತ್ತಿದೆ. ಜೂ.13ರಂದು ಬೆಳಗ್ಗೆ ರಾಹುಲ್ ಗಾಂಧಿ ಇ.ಡಿ. ಕಚೇರಿಗೆ ಹೋಗುವ ಪೂರ್ವದಿಂದಲೇ ಪಕ್ಷದ ನಾಯಕರೆಲ್ಲ ರಸ್ತೆಗಿಳಿದು ಹೋರಾಟ ಪ್ರಾರಂಭ ಮಾಡಿದ್ದರು. ನಿನ್ನೆ ಇಡೀ ದಿನ ಕಾಂಗ್ರೆಸ್ ಪ್ರತಿಭಟನೆ ನಡೆಯುತ್ತಲೇ ಇತ್ತು. ಈ ಮಧ್ಯೆ ಕೆಲವು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಂಡ ಪೊಲೀಸರ ವಿರುದ್ಧವೇ ಈಗ ಕಾಂಗ್ರೆಸ್ ನಾಯಕರು ತಿರುಗಿಬಿದ್ದಿದ್ದಾರೆ. ʼನಿನ್ನೆ ಪೊಲೀಸರು ನಮ್ಮನ್ನು ನಿಯಂತ್ರಿಸುವ ಭರದಲ್ಲಿ ನಮ್ಮ ಮೇಲೆ ಕೈ ಮಾಡಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದೇವೆʼ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪಕ್ಕೆಲುಬು ಮುರಿದಿದೆ. ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಚಿದಂಬರಂ ಮೇಲೆ ಹಲ್ಲೆ ನಡೆಸಿದ್ದಾರೆ. ತಳ್ಳಾಟ ಮಾಡಿದ್ದಾರೆ. ಇದೇ ಕಾರಣಕ್ಕೆ ಚಿದಂಬರಂ ಗಾಯಗೊಂಡಿದ್ದಾರೆ. ಅವರ ಎಡ ಪಕ್ಕೆಲುಬು ಮುರಿದಿದೆ. ಅವರ ಕನ್ನಡಕ ಕೂಡ ನೆಲದ ಮೇಲೆ ಬಿದ್ದಿತ್ತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ಎಲ್ಲೆಯನ್ನೂ ಮೀರುತ್ತಿದೆ. ಅನಾಗರಿಕತೆಯ ಪರಮಾವಧಿತನದ ಪ್ರದರ್ಶನ ಮಾಡುತ್ತಿದೆ. ಪೊಲೀಸರು ಪಿ. ಚಿದಂಬರಂ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಸಂಸದ ಪ್ರಮೋದ್ ತಿವಾರಿಯವರನ್ನೂ ನೂಕಿ ರಸ್ತೆಯ ಮೇಲೆ ಕೆಡವಿದ್ದರು. ಅವರ ತಲೆಗೂ ಗಾಯವಾಗಿ, ಪಕ್ಕೆಲುಬಿಗೆ ಹೊಡೆತ ಬಿದ್ದಿದೆ. ಇದೇನಾ ಪ್ರಜಾಪ್ರಭುತ್ವ? ಎಂದು ಪ್ರಶ್ನಿಸಿದ್ದಾರೆ.
ಪಿ.ಚಿದಂಬರಂ ಕೂಡ ತಮಗೆ ಗಾಯವಾದ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ʼತುಂಬ ದಪ್ಪದಾಗಿದ್ದ, ಗಟ್ಟಿಮುಟ್ಟಾದ ಮೂವರು ಪೊಲೀಸರು ಹಲ್ಲೆ ನಡೆಸಿದಾಗ್ಯೂ ಅದೃಷ್ಟಕ್ಕೆ ಅಂಥ ದೊಡ್ಡ ಗಾಯವಾಗಿಲ್ಲ. ಆದರೂ ಪಕ್ಕೆಲುಬಿನಲ್ಲಿ ಸಣ್ಣದಾದ ಬಿರುಕು ಕಾಣಿಸಿಕೊಂಡಿದೆ. ಅದು ಸರಿಯಾಗಲು 10 ದಿನವಾದರೂ ಬೇಕೆಂದು ವೈದ್ಯರು ತಿಳಿಸಿದ್ದಾರೆ. ಉಳಿದಂತೆ ನಾನು ಆರೋಗ್ಯವಾಗಿದ್ದೇನೆ ಮತ್ತು ನಾಳೆಯಿಂದಲೇ ನನ್ನ ಕೆಲಸ ಮುಂದುವರಿಯುತ್ತದೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: National Herald: ರಾಹುಲ್ ಗಾಂಧಿಗೆ ಇ.ಡಿ ಫುಲ್ ಗ್ರಿಲ್; ದೇಶಾದ್ಯಂತ ಕೈ ಪ್ರತಿಭಟನೆಯ ಸವಾಲ್
ವೇಣುಗೋಪಾಲ್‌ರನ್ನು ತಳ್ಳಿದ ಪೊಲೀಸ್
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ, ಹಿರಿಯ ಕಾಂಗ್ರೆಸ್ ನಾಯಕ-ರಾಜ್ಯಸಭಾ ಸದಸ್ಯ ಕೆ.ಸಿ.ವೇಣುಗೋಪಾಲ್ ಅವರನ್ನು ಪೊಲೀಸರು ಎತ್ತಿಕೊಂಡು ಆ ಕಡೆ ಕರೆದುಕೊಂಡು ಹೋಗಿದ್ದಲ್ಲದೆ, ಅವರನ್ನು ನೂಕಿದ ವಿಡಿಯೋ ವೈರಲ್ ಆಗುತ್ತಿದೆ. ಯುತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ತಳ್ಳಾಟದಲ್ಲಿ ಕೆ.ಸಿ.ವೇಣುಗೋಪಾಲ್ ತುಂಬ ಬಳಲಿದ್ದರು. ಬಳಿಕ ವೈದ್ಯರ ತಂಡ ಅವರನ್ನು ಪರಿಶೀಲಿಸಿ, ಚಿಕಿತ್ಸೆ ನೀಡಿದೆ.
ಇದನ್ನೂ ಓದಿ: 2ನೇ ದಿನವೂ ಮುಂದುವರಿದ ರಾಹುಲ್ ಗಾಂಧಿ ಇ ಡಿ ವಿಚಾರಣೆ; ಧರಣಿ ಕುಳಿತ ಕಾಂಗ್ರೆಸ್ಸಿಗರು