Site icon Vistara News

Manipur Landslide: ಮಣಿಪುರ ಭೂಕುಸಿತದ ಸಾವಿನ ಸಂಖ್ಯೆ 14ಕ್ಕೆ ಏರಿಕೆ; ಏಳು ಯೋಧರ ದುರ್ಮರಣ

Manipur Landslide 1

ಗುವಾಹಟಿ: ಮಣಿಪುರದ ನೋನಿ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಭೂಕುಸಿತದಲ್ಲಿ (Manipur Landslide) ಸಾವನ್ನಪ್ಪಿದವರ ಸಂಖ್ಯೆ ೧೪ಕ್ಕೆ ಏರಿಕೆಯಾಗಿದ್ದು, ಅದರಲ್ಲಿ ಏಳು ಮಂದಿ ಯೋಧರು ಎಂದು ಹೇಳಲಾಗಿದೆ. ಸ್ಥಳದಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಯಾರ್ಡ್‌ ಮತ್ತು ಪಕ್ಕದಲ್ಲಿದ್ದ ಭದ್ರತಾ ಕ್ಯಾಂಪ್‌ಗಳು ಕೂಡ ಕುಸಿತಗೊಂಡು ಅದರಡಿ ಸುಮಾರು 50ಜನರು ಸಿಲುಕಿದ್ದಾರೆ. ಮಣ್ಣು ಅಗೆದು ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆ ವೇಗದಿಂದ ನಡೆಯುತ್ತಿದ್ದು ಇದುವರೆಗೆ 13 ಯೋಧರನ್ನು ಮತ್ತು ಐವರು ಪೌರ ಕಾರ್ಮಿಕರನ್ನು ರಕ್ಷಿಸಲಾಗಿದೆ.

ದುರ್ಘಟನೆಯಲ್ಲಿ ಮೃತಪಟ್ಟ ಏಳು ಯೋಧರು ಸೇನೆಯ 107 ಪದಾತಿದಳ ಬೆಟಾಲಿಯನ್‌ಗೆ ಸೇರಿದವರು. ಜಿರಿಬಾಮ್‌ದಿಂದ ಇಂಫಾಲ್‌ ನಡುವೆ ರೈಲ್ವೆ ಯಾರ್ಡ್ ನಿರ್ಮಾಣ ಸೇರಿ ವಿವಿಧ ಕಾಮಗಾರಿ ನಡೆಯುತ್ತಿದ್ದು, ಅದರ ಕಾರ್ಮಿಕರು ಹಾಗೂ ರೈಲ್ವೆಗೆ ಸೇರಿದ ಉಪಕರಣಗಳ ಭದ್ರತೆಗಾಗಿ ನಿಯೋಜಿಸಲ್ಪಟ್ಟವರು. ಹಾಗೇ ಈಗ ಮಣ್ಣಿನಡಿ ನಾಪತ್ತೆಯಾದವರಲ್ಲಿ ಮೂವರು ರೈಲ್ವೆ ಅಧಿಕಾರಿಗಳು, 17 ಕಾರ್ಮಿಕರು, ಒಬ್ಬರು ಅಡುಗೆಯವರು ಮತ್ತು ತುಪುಲ್‌ ರೈಲ್ವೆ ನಿಲ್ದಾಣದ ಸಮೀಪವೇ ವಾಸವಾಗಿದ್ದು, ದಂಪತಿ ಹಾಗೂ ಅವರ 18 ತಿಂಗಳ ಪುತ್ರಿಯೂ ಸೇರಿದ್ದಾರೆ.

ರಾತ್ರಿ ಎಲ್ಲ ಮಲಗಿದ್ದಾಗ ಏಕಾಏಕಿ ಭೂಕುಸಿತ ಉಂಟಾಗಿದೆ. ಕೆಲವರು ಕುಸಿದ ಮಣ್ಣಿನೊಂದಿಗೆ ಇಜೇ ನದಿಗೆ ಬಿದ್ದಿದ್ದಾರೆ. ನಂತರ ಅವರು ಈಜಿಕೊಂಡು ಪಾರಾಗಿದ್ದಾರೆ ಎಂದೂ ಹೇಳಲಾಗಿದೆ. ಭೀಕರ ದುರಂತದ ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಣಿಪುರ ಸಿಎಂ ಬಿರೆನ್‌ ಸಿಂಗ್‌, ಲೆಫ್ಟಿನೆಂಟ್‌ ಜನರಲ್‌ ಆರ್‌.ಪಿ ಕಲಿತಾ ಮತ್ತಿತರರು ವರದಿ ಪಡೆದಿದ್ದಾರೆ.

ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್‌ ಸಿಬ್ಬಂದಿ

ಇದನ್ನೂ ಓದಿ: Land slide: ಮಣಿಪುರದಲ್ಲಿ ಭಾರಿ ಕುಸಿತ, ಏಳು ಸಾವು, 23 ಮಂದಿ ಇನ್ನೂ ಮಣ್ಣಿನೊಳಗೆ

Exit mobile version