ಇಂಫಾಲ: ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳ ಶವಗಳ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಣಿಪುರದಲ್ಲಿ ಮತ್ತೆ ಜನಾಕ್ರೋಶ ಭುಗಿಲೇಳುವ ಸಂಭವ ಕಂಡುಬರುತ್ತಿದೆ. ಬಂದೂಕು ಹಿಡಿದಿರುವ ಇಬ್ಬರು ದುಷ್ಕರ್ಮಿಗಳು ಕೂಡ ಈ ಫೋಟೋದಲ್ಲಿದ್ದಾರೆ. ಇವರು ಕುಕಿ ಸಮುದಾಯದವರು ಎಂದು ಹೇಳಲಾಗಿದೆ.
ಈ ಬಗ್ಗೆ ಜನಾಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಣಿಪುರ ಸರ್ಕಾರ(Manipur government) “ತ್ವರಿತ ಮತ್ತು ನಿರ್ಣಾಯಕ” ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಕೇಂದ್ರ ತನಿಖಾ ದಳ (CBI) ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಬ್ಬರು ವಿದ್ಯಾರ್ಥಿಗಳ ಶವಗಳು ಇನ್ನೂ ಪತ್ತೆಯಾಗದಿರುವುದು ಸವಾಲಾಗಿ ಪರಿಣಮಿಸಿದೆ.
ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಾಂಬಿ (17) ಮತ್ತು ಫಿಜಾಮ್ ಹೇಮ್ಜಿತ್ (20) ಸಶಸ್ತ್ರ ಗುಂಪೊಂದರ ಮುಂದೆ ಹುಲ್ಲುಗಾವಲಿನ ಕಾಂಪೌಂಡ್‌ನಲ್ಲಿ ಕುಳಿತಿರುವುದು ಫೋಟೋದಲ್ಲಿ ಕಂಡುಬರುತ್ತಿದೆ. ಲಿಂಥೋಯಿಂಗಾಂಬಿ ಬಿಳಿ ಟೀ ಶರ್ಟ್ ಧರಿಸಿದ್ದರೆ, ಹೇಮ್ಜಿತ್ ಚೆಕ್ಸ್ ಶರ್ಟ್ ಧರಿಸಿರುವುದು ಕಂಡುಬಂದಿದೆ. ಅವರ ಹಿಂದೆ ಬಂದೂಕುಗಳನ್ನು ಹೊಂದಿರುವ ಇಬ್ಬರು ಪುರುಷರು ಸ್ಪಷ್ಟವಾಗಿ ಗೋಚರಿಸುತ್ತಾರೆ. ಇನ್ನೊಂದು ಫೋಟೋದಲ್ಲಿ ವಿದ್ಯಾರ್ಥಿಗಳ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡುಬರುತ್ತಿದೆ.
ಭಾರಿ ಆಕ್ರೋಶ
ಈ ಪ್ರಕರಣವು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಭಾರಿ ಆಕ್ರೋಶವನ್ನು ಹುಟ್ಟು ಹಾಕಿದೆ. ಪ್ರಕರಣವನ್ನು ಭೇದಿಸಲು ಪೊಲೀಸರು ಯಾಕೆ ತಡ ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆಯೂ ಎದ್ದಿದೆ. ಜುಲೈನಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಅಂದು ಅಂಗಡಿಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳಲ್ಲಿ ಕಾಣಿಸಿಕೊಂಡ ಬಳಿಕ ಇವರ ಪತ್ತೆಯಾಗಿರಲಿಲ್ಲ.
ಆಧುನಿಕ ತಂತ್ರಜ್ಞಾನ ಬಳಕೆ
ಈ ಪ್ರಕರಣವನ್ನು ಕೂಡಲೇ ಭೇದಿಸಲು ತನಿಖಾಧಿಕಾರಿಗಳು ಆಧುನಿಕ ತಂತ್ರಜ್ಞಾನಗಳ ಮೊರೆ ಹೋಗಿದ್ದಾರೆ. ಫೋಟೊದ ಹಿನ್ನೆಲೆಯಲ್ಲಿ ಗೋಚರಿಸುವ ಇಬ್ಬರು ಪುರುಷರ ಗುರುತನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಸುಧಾರಿತ ಸೈಬರ್ ವಿಧಿವಿಜ್ಞಾನದ ಸಹಾಯ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ʼʼಎರಡು ವಿದ್ಯಾರ್ಥಿಗಳ ಫೋಟೊ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಅವರು ಜುಲೈಯಲ್ಲಿ ನಾಪತ್ತೆಯಾಗಿದ್ದರು. ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐಗೆ ಹಸ್ತಾಂತರಿಸಲಾಗಿದೆʼʼ ಎಂದು ಮಣಿಪುರ ಸರ್ಕಾರ ತಿಳಿಸಿದೆ.
“ಇಬ್ಬರು ವಿದ್ಯಾರ್ಥಿಗಳನ್ನು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಗುರುತಿಸಲು ರಾಜ್ಯ ಪೊಲೀಸರು, ಕೇಂದ್ರ ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸಲು ಭದ್ರತಾ ಪಡೆಗಳೂ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ” ಎಂದು ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ತನಿಖೆ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.
ಪರಸ್ಪರ ಆರೋಪ
ಮಣಿಪುರದ ಬೆಟ್ಟಗಳಲ್ಲಿ ಸುಮಾರು 25 ಕುಕಿ ದಂಗೆಕೋರ ಗುಂಪುಗಳ ಹಲವಾರು ಶಿಬಿರಗಳಿವೆ. ಅವು ಕೇಂದ್ರ, ರಾಜ್ಯ ಮತ್ತು ಮಿಲಿಟರಿಯೊಂದಿಗೆ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ(SOO) ಒಪ್ಪಂದಕ್ಕೆ ಸಹಿ ಹಾಕಿವೆ. ಕಣಿವೆ ಮೂಲದ ಸೇನಾಪಡೆಗಳು ತಮ್ಮ ಮೇಲೆ ದಾಳಿ ನಡೆಸುತ್ತಿವೆ ಎಂದು ಕುಕಿಗಳು ಆರೋಪಿಸಿದ್ದರೆ, ಕುಕಿ ದಂಗೆಕೋರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಹಿರಂಗವಾಗಿ ಹೋರಾಡುವ ಮೂಲಕ ಎಸ್ಒಒ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಸೈನ್ಯ ದೂರಿದೆ.
ಇದನ್ನೂ ಓದಿ: India Canada Row: ಮಣಿಪುರ, ಕಾಶ್ಮೀರಕ್ಕೆ ಹೋಗದಿರಿ; ಕೆನಡಾ ಮತ್ತೊಂದು ಉದ್ಧಟತನ
ಕುಕಿ ಮತ್ತು ಮೈತಿ ಸಮುದಾಯಗಳ ನಡುವೆ ಮೇ 3ರಂದು ಸಂಘರ್ಷ ಆರಂಭವಾಯಿತು. ಈ ಹಿಂಸಾಚಾರದಲ್ಲಿ ಇದುವರೆಗೆ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದಾರೆ.