Site icon Vistara News

Manipur violence: ಬೆತ್ತಲೆ ಮೆರವಣಿಗೆ ತಡೆಯಲು ಹೋದ ಸಂತ್ರಸ್ತೆಯ ಸಹೋದರನನ್ನೂ ಕೊಂದು ಹಾಕಿದ್ರು!

Manipur violence

ನವದೆಹಲಿ: ಇಡೀ ದೇಶವೇ ಬೆಚ್ಚಿ ಬಿದ್ದಿರುವ ಮಣಿಪುರ (Manipur Violence) ಇಬ್ಬರು ಮಹಿಳೆಯ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಹೊರ ಬೀಳುತ್ತಿವೆ(Manipur women paraded naked and raped). ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುತ್ತಿದ್ದವರನ್ನು ತಡೆಯಲು ಹೋದ ಆಕೆಯ ಕಿರಿಯ ಸಹೋದರನನ್ನು ಕೂಡ ಕೊಲೆ (Brother Murdered) ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ವಿಡಿಯೋ ವೈರಲ್ ಆದ ಬಳಿಕವಷ್ಟೇ ಇಡೀ ಘಟನೆಯು ಹೊರ ಜಗತ್ತಿಗೆ ಗೊತ್ತಾಗಿದೆ.

ಬುಡಕಟ್ಟು ಕುಕೀ ಸಮುದಾಯದ ಇಬ್ಬರು ಮಹಿಳೆಯರನ್ನು ಮೈತೈ ಕಿಡಿಗೇಡಿಗಳ ಗುಂಪು ಬೆತ್ತಲೆ ಮೆರವಣಿಗೆ ಮಾಡಿದ್ದು, ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬುಡಕಟ್ಟು ಸಮುದಾಯ ಆರೋಪ ಮಾಡಿದೆ. ಈ ವಿಡಿಯೋ ಕುಕೀಗಳಲ್ಲಿ ಆಕ್ರೋಶ ಕೆರಳಿಸಿದ್ದು, ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ನಾಂದಿಯಾಗಿದೆ. ಈ ವಿಡಿಯೋ ವಾಟ್ಸ್ಯಾಪ್‌ ಮುಂತಾದ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇಂಪಾಲ್‌ನಿಂದ 35 ಕಿಲೋಮೀಟರ್ ದೂರದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಿಳೆಯನ್ನು ಕಿಡಿಗೇಡಿಗಳ ಗ್ಯಾಂಗ್ ಬೆತ್ತಲೆಗೊಳಿಸಿದೆ. ಬಳಿಕ ಗಲಭೆಕೋರರು ದಾರಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಬೆತ್ತಲೆಗೊಳಿಸಿದ ಮಹಿಳೆಯರ ಮೇಲೆ ಆಕ್ರೋಶಿತರ ಗುಂಪು ಗ್ಯಾಂಗ್ ರೇಪ್ ಕೂಡ ಮಾಡಿದೆ ಎಂದು ಬುಡಕಟ್ಟು ಸಮುದಾಯ ಆರೋಪಿಸಿದೆ. ಈ ವೇಳೆ, ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರವನ್ನು ತಡೆಯಲು ಹೋದ ಸಂತ್ರಸ್ತೆಯ ಕಿರಿಯ ಸಹೋದರನನ್ನು ಕೂಡ ಕೊಲೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ; ’ದುಷ್ಟರನ್ನು ಸುಮ್ಮನೆ ಬಿಡುವುದಿಲ್ಲ’ ಎಂದ ಪ್ರಧಾನಿ ಮೋದಿ

ಸತತ ಎರಡು ತಿಂಗಳುಗಳಿಂದ ಜನಾಂಗೀಯ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ 2 ತಿಂಗಳಿಂದ ಮುಚ್ಚಿದ್ದ ಶಾಲೆಗಳು ಇತ್ತೀಚೆಗಷ್ಟೇ ಪುನಾರಂಭವಾಗಿತ್ತು. ಸತತ ಪ್ರಯತ್ನಗಳ ಬಳಿಕ ಸುದೀರ್ಘ ಹಿಂಸಾಚಾರ ತಣ್ಣಗಾಗಿತ್ತು. ಇದೀಗ ಈ ಭೀಕರ ಘಟನೆ ವಿಡಿಯೋ ಬಹಿರಂಗೊಂಡಿರುವುದು ಬುಡಕಟ್ಟು ಸಮುದಾಯಗಳನ್ನು ಮತ್ತಷ್ಟು ಕೆರಳಿಸಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್, ಮಣಿಪುರ ಹಿಂಸಾಚಾರ ಕುರಿತು ವಿಚಾರಣೆ ನಡೆಸಿತ್ತು. ‘ಮಣಿಪುರದಲ್ಲಿ ಮತ್ತಷ್ಟು ಕಿಚ್ಚು ಹಚ್ಚಲು ಸುಪ್ರೀಂ ಕೋರ್ಟನ್ನು ವೇದಿಕೆ ಆಗಿ ಬಳಸಿಕೊಳ್ಳಬೇಡಿ’ ಎಂದು ಸರ್ವೋಚ್ಚ ನ್ಯಾಯಾಲಯವು, 2 ತಿಂಗಳಿಂದ ಜನಾಂಗೀಯ ಸಂಘರ್ಷದಲ್ಲಿ ತೊಡಗಿರುವ ಮೈತೇಯಿ ಹಾಗೂ ಕುಕಿ ಸಮುದಾಯಗಳಿಗೆ ಎಚ್ಚರಿಕೆ ನೀಡಿತ್ತು. ಆದರೆ ಇದೀಗ ಮತ್ತೆ ಗಲಭೆ ಸೂಚನೆಗಳು ವ್ಯಕ್ತವಾಗುತ್ತಿವೆ. ಮಣಿಪುರದ ವಸ್ತುಸ್ಥಿತಿ ವರದಿ ಸಲ್ಲಿಸಿದ ರಾಜ್ಯ ಸರ್ಕಾರ, 142 ಜನರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. 5,995 ಎಫ್‌ಐಆರ್‌ ದಾಖಲಾಗಿದ್ದು, 6745 ಜನರನ್ನು ಬಂಧಿಸಲಾಗಿದೆ. 6 ಕೇಸುಗಳ ತನಿಖೆಯನ್ನು ಸಿಬಿಐ ನಡೆಸುತ್ತಿದೆ ಎಂದು ಹೇಳಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version