Site icon Vistara News

Manipur Violence: ಮಣಿಪುರದಲ್ಲಿ ಸುಟ್ಟು ಬೂದಿಯಾಗುತ್ತಿರುವ ಶಾಲೆಗಳು, ಚರ್ಚ್​​ಗಳು; ಐಟಿ ಅಧಿಕಾರಿಯ ಹತ್ಯೆ

Manipur violence Income Tax department official killed By Protesters

#image_title

ಮಣಿಪುರದಲ್ಲಿ ದಿನದಿನಕ್ಕೂ ಹಿಂಸಾಚಾರದ ಪ್ರಮಾಣ (Manipur Violence) ಹೆಚ್ಚುತ್ತಿದೆ. ಮೈತೈ ಸಮುದಾಯದವರು ತಮಗೆ ಪರಿಶಿಷ್ಟ ಪಂಗಡದ (ST) ಸ್ಥಾನಮಾನ ಬೇಕು ಎಂದು ಆಗ್ರಹಿಸುತ್ತಿದ್ದರೆ, ಮೈತೈಗಳಿಗೆ (Meiteis Community) ಯಾವ ಕಾರಣಕ್ಕೂ ಎಸ್​ಟಿ ಸ್ಥಾನಮಾನ ಕೊಡಬಾರದು ಎಂದು ಮಣಿಪುರದ ಇನ್ನಿತರ ಬುಡಕಟ್ಟು ಸಮುದಾಯಗಳಾದ ನಾಗಾಗಳು, ಜೋಮಿಗಳು ಮತ್ತು ಕುಕಿಗಳು ಒತ್ತಾಯಿಸುತ್ತಿವೆ. ಎಸ್​​ಟಿ ವರ್ಗದ ಸ್ಥಾನಮಾನ ಬೇಕು ಎಂಬ ಮೈತೈಗಳ ಬೇಡಿಕೆಗೆ ಸಂಬಂಧಪಟ್ಟಂತೆ ನಾಲ್ಕು ವಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸುವಂತೆ ಮಣಿಪುರ ಹೈಕೋರ್ಟ್​, ಅಲ್ಲಿನ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಅದರ ಬೆನ್ನಲ್ಲೇ ಮಣಿಪುರದಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ.

ಮೈತೈಗಳಿಗೆ ಎಸ್​ಟಿ ಸ್ಥಾನಮಾನ ಕೊಡುವುದನ್ನು ಖಂಡಿಸಿ, ಮಣಿಪುರದ ಆಲ್​ ಟ್ರೈಬಲ್​ ಸ್ಟೂಡೆಂಟ್ ಯೂನಿಯನ್​ (ATSUM) ಇತ್ತೀಚೆಗೆ ಚುರಾಚಂದ್​​ಪುರ ಜಿಲ್ಲೆಯ ಟೋರ್ಬಂಗ್​​ ಪ್ರದೇಶದಲ್ಲಿ ಏಕತಾ ಮೆರವಣಿಗೆಯನ್ನು ಆಯೋಜಿಸಿತ್ತು. ಈ ಮೆರವಣಿಗೆಯಿಂದಲೇ ಹಿಂಸಾಚಾರ ಪ್ರಾರಂಭವಾಗಿದೆ. ಎಲ್ಲೆಲ್ಲಿ ಹಿಂಸಾಚಾರ ಮಿತಿಮೀರಿದೆಯೋ ಅಲ್ಲೆಲ್ಲ ಇಂಟರ್ನೆಟ್​ ಸಂಪರ್ಕ ಕಡಿತಗೊಂಡಿದೆ. ಸೆಕ್ಷನ್​ 144 ಜಾರಿಯಾಗಿದೆ. ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡಿಕ್ಕುವ ಆದೇಶಕ್ಕೆ ಅಲ್ಲಿನ ರಾಜ್ಯಪಾಲರ ಅನುಮೋದನೆಯೂ ಸಿಕ್ಕಿದೆ.

ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚುತ್ತಿರುವ ಪ್ರತಿಭಟನಾಕಾರರು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬನನ್ನು ಹತ್ಯೆ ಮಾಡಿದ್ದಾರೆ ಎಂದು ಭಾರತೀಯ ಕಂದಾಯ ಸೇವೆ ಟ್ವೀಟ್ ಮಾಡಿದೆ ಇಂಫಾಲ್​​ನಲ್ಲಿ ಕರ್ತವ್ಯದಲ್ಲಿದ್ದ ಐಟಿ ಅಧಿಕಾರಿ ಲೆಟ್ಮಿಂಥಾಂಗ್ ಹಾಕಿಪ್ ಎಂಬುವರನ್ನು ಅವರ ಕಚೇರಿಯಿಂದ ಹೊರಗೆ ಎಳೆದುಕೊಂಡು ಬಂದು ಹತ್ಯೆ ಮಾಡಿದ್ದಾರೆ. ಇದು ಮಾಡಿದವರು ಮೈತೈ ದುಷ್ಕರ್ಮಿಗಳು ಎಂದೂ ಟ್ವೀಟ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ: ವಿಸ್ತಾರ Explainer : ಮಣಿಪುರದಲ್ಲಿ ಹಿಂಸೆಯ ಭುಗಿಲು; ಬುಡಕಟ್ಟು ಜನರ ಕದನಕ್ಕೆ ಏನು ಕಾರಣ?

ಮೈತೈ ಸಮುದಾಯ ಮತ್ತು ಇತರ ಸಮುದಾಯದವರ ನಡುವಿನ ಸಂಘರ್ಷದಲ್ಲಿ ಹಲವರ ಪ್ರಾಣ ಹೋಗುತ್ತಿದೆ. ಅನೇಕರು ಗಾಯಗೊಂಡಿದ್ದಾರೆ. ಆದರೆ ಇದುವರೆಗೂ ಪೊಲೀಸರು ಮೃತರ ಸಂಖ್ಯೆಯನ್ನು ಬಹಿರಂಗಪಡಿಸುತ್ತಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರತಿಭಟನೆ ಅದೆಷ್ಟು ಮಿತಿಮೀರಿದೆ ಎಂದರೆ ಹೋರಾಟದ ನೆಪದಲ್ಲಿ ಪ್ರತಿಭಟನಾಕಾರರು ಚರ್ಚ್​ಗಳು, ಶಾಲೆ, ಮನೆಗಳು, ವಾಹಗನಗಳು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆಲ್ಲ ಬೆಂಕಿಯಿಡುತ್ತಿದ್ದಾರೆ. ಸದ್ಯ ಮಣಿಪುರದಲ್ಲಿ ಪೊಲೀಸರು, ಪ್ಯಾರಾಮಿಲಿಟರಿ ಪಡೆಯ 14 ಘಟಕಗಳು, 1000ಕ್ಕೂ ಹೆಚ್ಚು ಕೇಂದ್ರ ಪ್ಯಾರಾಮಿಲಿಟರಿ ಸಿಬ್ಬಂದಿ ನಿಯೋಜನೆಗೊಂಡು, ಹಿಂಸಾಚಾರ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ.

Exit mobile version