Site icon Vistara News

Manipur Violence: ಮಹಿಳೆಯರ ಮೇಲೆ ದೌರ್ಜನ್ಯ ನಡೆದು 2 ತಿಂಗಳಾದರೂ ಕ್ರಮ ಏಕಿಲ್ಲ? ಪೊಲೀಸರು ಕೊಟ್ಟ ಕಾರಣ ಇದು

Manipur High Court modifies its order to add Maitai community to ST list

ಇಂಫಾಲ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ (Manipur Violence) ಮಾಡಿದ ವಿಡಿಯೊ ವೈರಲ್‌ ಆಗಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜುಲೈ 20ರಂದು ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಘಟನೆ ನಡೆದು ಎರಡು ತಿಂಗಳಾದರೂ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂಬ ಕುರಿತು ಮಣಿಪುರ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಬಳಿಕ ಎಲ್ಲ ಆರೋಪಿಗಳು ಪರಾರಿಯಾಗಿದ್ದಾರೆ. 800-1000 ಜನ ಅಮಾನುಷ ಕೃತ್ಯದಲ್ಲಿ ತೊಡಗಿದ್ದರು. ಎಲ್ಲರೂ ಮನೆ ಬಿಟ್ಟು ಓಡಿಹೋಗಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದರೂ ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ. ಅಲ್ಲದೆ, ನೋಂಗ್‌ಪೋಕ್‌ ಸೆಕ್ಮಾಯಿ ಪೊಲೀಸ್‌ ಠಾಣೆಗೆ ಜನ ನುಗ್ಗಿದ್ದರು. ಪೊಲೀಸರು ಠಾಣೆಯಲ್ಲಿ ಕಾವಲು ಕಾಯುತ್ತಿದ್ದರು” ಎಂದು ಕಾಂಗ್‌ಪೊಕ್ಪಿ ಎಸ್‌ಪಿ ಸಚ್ಚಿದಾನಂದ ಮಾಹಿತಿ ನೀಡಿದ್ದಾರೆ.

ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಸಾವಿರಾರು ಜನ ಇಬ್ಬರು ಮಹಿಳೆಯರನ್ನು ಬೆತ್ತೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಇದಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯೊಬ್ಬರ ಸಹೋದರನನ್ನು ಕೊಲೆ ಮಾಡಿದ್ದಾರೆ. ನಮ್ಮ ಮೇಲೂ ಹಲ್ಲೆಯಾಗಿದೆ ಎಂದು ಮಹಿಳೆಯರ ಕುಟುಂಬಸ್ಥರು ತಿಳಿಸಿದ್ದಾರೆ. ಮೇ 4ರಂದೇ ಘಟನೆ ನಡೆದಿದ್ದು, ಇದುವರೆಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ. ಆದರೂ, ಪೊಲೀಸರು ನೀಡಿರುವ ಕಾರಣಗಳು ಜನರಿಗೆ ಸಮಾಧಾನ ತಂದಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಮಹಿಳೆಯರ ನಗ್ನ ಮೆರವಣಿಗೆ ಅಮಾನುಷ, ಮಣಿಪುರದ ಅರಾಜಕತೆ ಮುಗಿಯಲಿ

ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೊ ತಡವಾಗಿ ವೈರಲ್ ಆದರೂ ದೇಶಾದ್ಯಂತ ಸಂಚಲನ ಮೂಡಿಸಿದೆ. ಮಣಿಪುರ ಸಿಎಂ ಎನ್.ಬಿರೇನ್‌ ಸಿಂಗ್‌ ರಾಜೀನಾಮೆಗೆ ಒತ್ತಾಯ ಕೇಳಿಬಂದಿವೆ. ಮೋದಿ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಪ್ರತಿಪಕ್ಷಗಳು ಸಂಸತ್‌ನಲ್ಲಿ ಇದೇ ವಿಚಾರಕ್ಕೆ ಗಲಾಟೆ ನಡೆಸುತ್ತಿವೆ. “ಘಟನೆಯಿಂದ ಮನಸ್ಸಿಗೆ ನೋವಾಗಿದ್ದು, ಅಪರಾಧಿಗಳನ್ನು ಬಿಡುವುದಿಲ್ಲ” ಎಂದು ಮೋದಿ ಈಗಾಗಲೇ ಹೇಳಿದ್ದಾರೆ.

Exit mobile version