ನವ ದೆಹಲಿ: ನೂತನ ಅಬಕಾರಿ ನೀತಿಯಲ್ಲಿನ ಅಕ್ರಮ ತನಿಖೆ ಕೈಗೆತ್ತಿಕೊಂಡು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಇತರ ಹಲವು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿರುವ ಸಿಬಿಐ, ‘ಮನೀಷ್ ಸಿಸೋಡಿಯಾ ಅವರೇ ಪ್ರಕರಣದ ಪ್ರಥಮ ಆರೋಪಿ’ ಎಂದು ಉಲ್ಲೇಖಿಸಿದೆ. ಸಿಬಿಐನ ಎಫ್ಐಆರ್ ಕಾಪಿ ಇದೀಗ ಲಭ್ಯವಾಗಿದ್ದು ಅದರಲ್ಲಿ ಸಿಸೋಡಿಯಾ ಹೆಸರೇ ಮೊದಲಿದೆ. ಮನೀಷ್ ಸೇರಿ ಒಟ್ಟು 15 ಆರೋಪಿಗಳನ್ನು ಹೆಸರಿಸಲಾಗಿದೆ. ಅದರೊಂದಿಗೆ ಇನ್ನಿತರ ಜನಸೇವಕರು ಮತ್ತು ಖಾಸಗಿ ವ್ಯಕ್ತಿಗಳು ಇದ್ದಾರೆ ಎಂದೂ ಉಲ್ಲೇಖ ಮಾಡಿದೆ.
ನೂತನ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರ ನಡೆದಿರುವ ಆರೋಪದಡಿ ತನಿಖೆ ಪ್ರಾರಂಭಿಸಿರುವ ಸಿಬಿಐ ಇಂದು ಮನೀಷ್ ಸಿಸೋಡಿಯಾಗೆ ಸೇರಿದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು ಐದು ತಾಸುಗಳ ಕಾಲ ರೇಡ್ ಮಾಡಿರುವ ಸಿಬಿಐ, ಹಲವು ಅತ್ಯಂತ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಆದರೆ ಇವು ಯಾವುದಕ್ಕೆ ಸಂಬಂಧಪಟ್ಟಿದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಬಿಐ ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸುತ್ತಿಲ್ಲ. ಹಾಗೇ, ಸಿಸೋಡಿಯಾ ಅವರ ಖಾಸಗಿ ವಾಹನಕ್ಕಾಗಿ ಹುಡುಕಾಟವೂ ಶುರುವಾಗಿದೆ.
ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿಯಾಗಿದ್ದು ಈಗ ರಾಜಕೀಯ ಸ್ವರೂಪ ಪಡೆದಕೊಂಡಿದೆ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ, ದೆಹಲಿ ಸರ್ಕಾರವನ್ನು ದುರ್ಬಲಗೊಳಿಸಲೆಂದೇ ತನಿಖಾ ಏಜೆನ್ಸಿಗಳನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ. ಆಪ್ಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಅನುರಾಗ್ ಠಾಕೂರ್, ‘ಆಮ್ ಆದ್ಮಿ ಪಕ್ಷದ ಮುಖಂಡರ ವಿರುದ್ಧ ಭ್ರಷ್ಟಾಚಾರ ಕೇಸ್ ದಾಖಲಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಹಣ ಅಕ್ರಮ ವರ್ಗಾವಣೆ ಕೇಸ್ನಲ್ಲಿ ಮೇ ತಿಂಗಳಲ್ಲಿ ಸತ್ಯೇಂದ್ರ ಜೈನ್ ಅರೆಸ್ಟ್ ಆಗಿದ್ದಾರೆ. ಹಾಗಿದ್ದಾಗ್ಯೂ ಅವರನ್ನು ಅರವಿಂದ್ ಕೇಜ್ರಿವಾಲ್ ಇನ್ನೂ ಅಮಾನತು ಮಾಡಿಲ್ಲ. ಈಗ ಕೇಜ್ರಿವಾಲ್ ಮತ್ತು ಮನೀಷ್ ಸಿಸೋಡಿಯಾ ನೈಜ ಮುಖ ಸಾರ್ವಜನಿಕರ ಎದುರು ಅನಾವರಣಗೊಂಡಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನ್ಯೂಯಾರ್ಕ್ ಟೈಮ್ಸ್ಲ್ಲಿ ವರದಿ ಬಂದಿದ್ದಕ್ಕೇ ಸಿಬಿಐ ದಾಳಿ ಆಗಿದೆ ಎಂದ ಆಪ್; ಪೇಡ್ ಎಂದು ಟೀಕಿಸಿದ ಬಿಜೆಪಿ