ನವ ದೆಹಲಿ: ಇಂದು ರಾಷ್ಟ್ರಪತಿ ಚುನಾವಣೆ ನಡೆದು ಬೆಳಗ್ಗೆ 11ಗಂಟೆಯಿಂದ ಮತದಾನ ಪ್ರಾರಂಭವಾಗಿತ್ತು. ದೇಶದ ಎಲ್ಲ ಕಡೆ ಶಾಸಕರು/ ಸಂಸದರು ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ. ಇದೆಲ್ಲದರ ಮಧ್ಯೆ, ಈ ಚುನಾವಣೆಯಲ್ಲಿ ಮಾಜಿ ಪ್ರಧಾನಮಂತ್ರಿಗಳಿಬ್ಬರು ವೀಲ್ ಚೇರ್‌ನಲ್ಲಿ ಬಂದು ಮತ ಚಲಾಯಿಸಿದರು. ಇವರಿಬ್ಬರಿಗೂ 89 ವರ್ಷ. ಕಾಡುವ ಅನಾರೋಗ್ಯ, ನಡೆಯಲಾಗದ ಸ್ಥಿತಿಯ ಮಧ್ಯೆಯೂ ಬಂದು ಮತದಾನದ ಬದ್ಧತೆ ತೋರಿಸಿದ್ದಾರೆ.
ಅಂದಹಾಗೇ, ನಾವು ಹೇಳುತ್ತಿರುವುದು ಮಾಜಿ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗ್ ಮತ್ತು ಎಚ್.ಡಿ.ದೇವೇಗೌಡ ಅವರ ಬಗ್ಗೆ. ಮನಮೋಹನ್ ಸಿಂಗ್ ದೆಹಲಿಯಲ್ಲಿ ಸಂಸತ್ತಿನಲ್ಲಿ ಮತದಾನ ಮಾಡಿದರೆ, ದೇವೇಗೌಡರು ಕರ್ನಾಟಕದ ವಿಧಾನಸೌಧದಲ್ಲಿ ಮತಚಲಾಯಿಸಿದ್ದಾರೆ. ಆದರೆ ಇಬ್ಬರೂ ಮತಗಟ್ಟೆಗೆ ಹೋಗಿದ್ದು ವೀಲ್‌ಚೇರ್‌ನಲ್ಲಿ.
ತುಂಬ ದಿನಗಳ ಬಳಿಕ ಕಾಣಿಸಿಕೊಂಡ ಸಿಂಗ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ ಎಂಬುದು ಇಂದು ಅವರನ್ನು ನೋಡಿದಾಗಲೇ ಸ್ಪಷ್ಟವಾಗುತ್ತಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರಿಗೆ ವಿಪರೀತ ಜ್ವರ, ಸುಸ್ತು ಕಾಣಿಸಿಕೊಂಡು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್‌ಚಾರ್ಜ್ ಆಗಿದ್ದರು. ಹೀಗಾಗಿ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಅವರು ಆಗಮಿಸಿರಲಿಲ್ಲ. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಸುಮಾರು 10ತಿಂಗಳೇ ಕಳೆದು ಹೋಗಿತ್ತು.
ಇಂದು ಮಾಸ್ಕ್ ಧರಿಸಿ, ವೀಲ್‌ಚೇರ್‌ನಲ್ಲಿ ಬಂದ ಮನಮೋಹನ್ ಸಿಂಗ್ ಅವರಿಗೆ ಎದ್ದುನಿಲ್ಲಲೂ ಆಗದಿರುವಷ್ಟು ನಿಶ್ಯಕ್ತಿ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಮತಪೆಟ್ಟಿಗೆಗೆ ಮತದ ಚೀಟಿ ಹಾಕುವಾಗ ನಾಲ್ವರು ಅಧಿಕಾರಿಗಳು ಅವರ ಕೈ ಹಿಡಿದು ಎಬ್ಬಿಸಿ ನಿಲ್ಲಿಸಿದ್ದಾರೆ. ಮನಮೋಹನ್ ಸಿಂಗ್ ದೇಹ ಆಗಲೂ ಸಣ್ಣದಾಗಿ ಕಂಪಿಸುತ್ತಲೇ ಇರುವುದನ್ನು ಇದೀಗ ವೈರಲ್ ಆದ ವಿಡಿಯೋದಲ್ಲಿ ನೋಡಬಹುದು. ಮನಮೋಹನ್ ಸಿಂಗ್‌ರನ್ನು ಈ ಸ್ಥಿತಿಯಲ್ಲಿ ನೋಡಿದ ಹಲವು ಕಾಂಗ್ರೆಸ್ಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಆರೋಗ್ಯ ಬಹುಬೇಗ ಸುಧಾರಿಸಲಿ ಎಂದು ಹಾರೈಸಿದ್ದಾರೆ.
ದೇವೇಗೌಡರೂ ವೀಲ್ ಚೇರ್‌ನಲ್ಲಿ
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಕೂಡ ಇಂದು ವಿಧಾನಸೌಧಕ್ಕೆ ವೀಲ್‌ಚೇರ್‌ನಲ್ಲಿ ಹೋಗಿ, ಕುರ್ಚಿಯಲ್ಲೇ ಕುಳಿತು ಮತದಾನ ಮಾಡಿದ್ದಾರೆ. ದೇವೇಗೌಡರಿಗೂ 89ವರ್ಷ. ಅವರಿಗೆ ಮಂಡಿನೋವು, ಕಾಲು ಪಾದ ನೋವು ಇದೆ. ಮೆಟ್ಟಿಲುಗಳ್ನು ಹತ್ತಲೂ ಅವರಿಗೆ ಸಾಧ್ಯವಿಲ್ಲ. ಅವರ ಜತೆಗೆ ಸಹಾಯಕ್ಕೆ ಯಾರಾದರೂ ಇರಲೇಬೇಕಾಗಿದೆ. ಅದರಲ್ಲೂ ಕಳೆದ ವರ್ಷ ಅವರು ಕೊವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದ ನಂತರ ಆರೋಗ್ಯ ಇನ್ನೂ ಸೂಕ್ಷ್ಮವಾಗಿದೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಮತದಾನ ಆರಂಭ: ನಡೆದುಬಂದು ಮತ ಚಲಾಯಿಸಿದ ಇಬ್ಬರು ಶಾಸಕರು