ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳ ಕೊನೇ ಭಾನುವಾರ ನಡೆಸಿಕೊಡುವ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ (Mann Ki Baat@100) ಶತಕ ಪೂರೈಸಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಏಪ್ರಿಲ್ 30ರಂದು ಪ್ರಧಾನಿ ನರೇಂದ್ರ ಮೋದಿ(PM Modi)ಯವರು ಮನ್ ಕೀ ಬಾತ್ನ 100ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೀಗ ಮನ್ ಕೀ ಬಾತ್ ಶತಕದ ಆವೃತ್ತಿ ತಲುಪುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಸಂಭ್ರಮಿಸುವ ಸಲುವಾಗಿ ಬಿಜೆಪಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದೆ.
ಅದರಲ್ಲಿ ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನಡೆಸಲಾಗುತ್ತಿರುವ ಮನ್ ಕೀ ಬಾತ್ ರಾಷ್ಟ್ರೀಯ ಸಮಾವೇಶವೂ ಒಂದು. ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಮನ್ ಕೀ ಬಾತ್@100 ರಾಷ್ಟ್ರೀಯ ಸಮಾವೇಶವನ್ನು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಉದ್ಘಾಟನೆ ಮಾಡಿದ್ದಾರೆ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಠಾಕೂರ್ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಗೃಹ ಸಚಿವ ಅಮಿತ್ ಶಾ, ರೈಲ್ವೆ ಇಲಾಖೆ ಸಚಿವ ಅಶ್ವನಿ ವೈಷ್ಣವ್ ಮತ್ತಿತರರು ಇದ್ದಾರೆ..ಇಂದು ಇಡೀ ದಿನ ಸಮಾವೇಶ ನಡೆಯಲಿದೆ.
ಇಷ್ಟು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಒಟ್ಟು 700 ಗಣ್ಯರ/ಸಾಧಕರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರಲ್ಲಿ 100ಮಂದಿ ಗಣ್ಯರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗಿದೆ.. ಅದರ ಅನ್ವಯ ಕಲೆ, ಸಂಸ್ಕೃತಿ, ವ್ಯಾಪಾರ, ಕ್ರೀಡೆ, ಸಾಮಾಜಿಕ ಕೆಲಸ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಸಮಾವೇಶದಲ್ಲಿ ಉಪಸ್ಥಿತರಿರುವರು. ಇನ್ನು ಈ ಸಮಾವೇಶದಲ್ಲಿ ಬಾಲಿವುಡ್ ನಟ ಆಮೀರ್ ಖಾನ್, ರವೀನಾ ಟಂಡನ್, ಕ್ರೀಡಾ ಪಟುಗಳಾದ ದೀಪಿಕಾ ಮಲಿಕ್ (ಅಥ್ಲೀಟ್), ನಿಖಾತ್ ಜರೀನ್ (ಬಾಕ್ಸರ್), ವಿವಿಧ ಪ್ರಮುಖ ಪತ್ರಕರ್ತರು, ರೇಡಿಯೋ ಜಾಕಿಗಳು, ಉದ್ಯಮಿಗಳು ಪಾಲ್ಗೊಂಡು, ಸಂವಾದದಲ್ಲಿ ಭಾಗವಹಿಸುವರು.
ಇದನ್ನೂ ಓದಿ: Mann Ki Baat: ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರ ಮನ್ ಕೀ ಬಾತ್; ವರ್ಷದ ಮೊದಲ ರೇಡಿಯೋ ಕಾರ್ಯಕ್ರಮ
ಆಮೀರ್ ಖಾನ್ ಹೇಳಿದ್ದೇನು?
ಇಂದು ಮನ್ ಕೀ ಬಾತ್ ಸಮಾವೇಶಕ್ಕೆ ಬಂದ ನಟ ಆಮೀರ್ ಖಾನ್ ಮಾಧ್ಯಮದೊಂದಿಗೆ ಮಾತನಾಡಿ ‘ದೇಶದ ನಾಯಕ ಸಾಮಾನ್ಯ ಜನರೊಂದಿಗೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸುವುದು, ತಮ್ಮ ವಿಚಾರಗಳನ್ನು ಅವರ ಎದುರು ಇಡುವುದು, ಸಲಹೆಗಳನ್ನು ಕೊಡುವುದೆಲ್ಲ ಸಂವಹನ ಕ್ರಿಯೆಯ ಅತ್ಯಂತ ಪ್ರಮುಖ ಭಾಗ’ ಎಂದು ಹೇಳಿದರು. ‘ಒಬ್ಬ ನಾಯಕ ಪ್ರಬಲ ಸಂವಹನದೊಂದಿಗೆ ಹೇಗೆ ದೇಶವನ್ನು ಮುನ್ನಡೆಸುತ್ತಾರೆ, ಅವರು ನೋಡುವುದನ್ನು ಜನರಿಗೆ ಹೇಗೆ ಹೇಳುತ್ತಾರೆ, ನಾಯಕನಾದವನು ಭವಿಷ್ಯವನ್ನು ಹೇಗೆ ನೋಡುತ್ತಾನೆ, ಜನರಿಂದ ಯಾವ ಸ್ವರೂಪದ ಬೆಂಬಲವನ್ನು ಬಯಸುತ್ತಿದ್ದಾನೆ..ಎಂಬುದನ್ನೆಲ್ಲ ಈ ಮನ್ ಕೀ ಬಾತ್ ತೋರಿಸಿದೆ’ ಎಂದೂ ಆಮರ್ ಖಾನ್ ಹೇಳಿದ್ದಾರೆ.
2014ರಲ್ಲಿ ನರೇಂದ್ರ ಮೋದಿಯವರು ಮೊದಲ ಬಾರಿ ಪ್ರಧಾನಿಯಾದ ನಂತರ, ಅದೇ ವರ್ಷ ಅಕ್ಟೋಬರ್ನಲ್ಲಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದರು. ಇದು ರೇಡಿಯೋ ಮೂಲಕ ಮೋದಿಯವರು ದೇಶದ ಜನರೊಂದಿಗೆ ಮಾತನಾಡುವ ಕಾರ್ಯಕ್ರಮ. ಇಲ್ಲಿ ಅವರು ರಾಜಕೀಯ ವಿಷಯಗಳನ್ನು ಹೇಳುವುದೇ ಇಲ್ಲ. ಬದಲಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಅರಿವು ಮೂಡಿಸುತ್ತಾರೆ. ಯಾವುದೋ ಮೂಲೆಯಲ್ಲಿ, ಎಲೆಮರೆಯ ಕಾಯಿಯಂತಿದ್ದು, ಒಂದು ಕ್ಷೇತ್ರದಲ್ಲಿ ಸದ್ದಿಲ್ಲದೆ ಸಾಧನೆ ಮಾಡಿದವರ ಹೆಸರು ಉಲ್ಲೇಖಿಸಿ, ಅಭಿನಂದನೆ ಸಲ್ಲಿಸುತ್ತಾರೆ. ಜತೆಗೆ ಅಂಥವರನ್ನು ಸ್ಪೂರ್ತಿಯಾಗಿಟ್ಟುಕೊಳ್ಳಿ ಎಂದು ಇತರರಿಗೆ ಸಲಹೆ ನೀಡುತ್ತಾರೆ. ಹವಾಮಾನ ವೈಪರೀತ್ಯ, ನೀರಿನ ಮಹತ್ವ ಮತ್ತಿತರ ವಿಷಯಗಳನ್ನೂ ಅವರು ಈಗಾಗಲೇ ಮನ್ ಕೀ ಬಾತ್ನಲ್ಲಿ ಮಾತಾಡಿದ್ದಾರೆ. 2014ರಿಂದ ಇದುವರೆಗೆ ಅವರು ಒಂದೇ ಒಂದು ತಿಂಗಳೂ ಕೂಡ ಇದನ್ನು ತಪ್ಪಿಸಿಲ್ಲ. ಸದ್ಯ ಮನ್ ಕೀ ಬಾತ್ಗೆ ಕೋಟ್ಯಂತರ ಶ್ರೋತೃಗಳಿದ್ದಾರೆ.