ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಇಂದು 100ನೇ ಆವೃತ್ತಿಯ ಮನ್ ಕಿ ಬಾತ್ (Mann Ki Baat)ನಲ್ಲಿ ಮಾತನಾಡಿದ್ದಾರೆ. ಮನ್ ಕೀ ಬಾತ್ ನನ್ನ ಪಾಲಿಗೆ ವ್ರತವಿದ್ದಂತೆ ಎಂದು ಅವರು ಹೇಳಿದ್ದಾರೆ. ಹಲವು ವಿಷಯಗಳನ್ನು/ಗಣ್ಯರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಅವರು ಹೇಳಿದ್ದು ಆರ್ಎಸ್ಎಸ್ ನಾಯಕ ಮತ್ತು ವಕೀಲರಾಗಿದ್ದ ಲಕ್ಷ್ಮಣ್ ರಾವ್ ಇನಾಮ್ದಾರ್ (Laxman Rao Inamdar) ಅವರ ಹೆಸರು. ತಾವು ಲಕ್ಷ್ಮಣ್ ರಾವ್ ಅವರನ್ನು ತಮ್ಮ ಮಾರ್ಗದರ್ಶಕರನ್ನಾಗಿ (ಮೆಂಟರ್) ಪರಿಗಣಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.
‘ನನಗೆ ಒಬ್ಬರು ಮಾರ್ಗದರ್ಶಕರು ಇದ್ದರು. ಅವರು ಲಕ್ಷ್ಮಣ್ ರಾವ್ ಇನಾಮ್ದಾರ್ ಜಿ. ನಾವೆಲ್ಲ ಅವರನ್ನು ವಕೀಲ್ ಸಾಹೇಬ್ ಎಂದೇ ಕರೆಯುತ್ತಿದ್ದೆವು. ನಾವು ಇನ್ನೊಬ್ಬರಲ್ಲಿರುವ ಒಳ್ಳೆಯ ಗುಣ-ಸ್ವಭಾವಗಳನ್ನು ಗೌರವಿಸಬೇಕು ಮತ್ತು ಅವುಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಸದಾ ಹೇಳುತ್ತಿದ್ದರು. ಲಕ್ಷ್ಮಣ್ ಜಿ ಮಾತುಗಳು ನನ್ನಲ್ಲಿ ಸ್ಫೂರ್ತಿ ತುಂಬಿವೆ. ಇನ್ನೊಬ್ಬರಿಂದ ಕಲಿಯಲು, ಮತ್ತೊಬ್ಬರ ಸಾಧನೆಯಿಂದ ನಾವು ಸ್ಫೂರ್ತಿ ಪಡೆಯಲು ಮನ್ ಕೀ ಬಾತ್ ಒಂದು ಪ್ರಮುಖ ಮಾಧ್ಯಮವಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ಓದಿ:Mann ki Baat : ಮನ್ ಕೀ ಬಾತ್‌ಗೆ ವಿಶೇಷ ಸಂದೇಶ ನೀಡಿದ ಯುನೆಸ್ಕೊ ಮುಖ್ಯಸ್ಥರು ಹೇಳಿದ್ದೇನು?
ನರೇಂದ್ರ ಮೋದಿಯವರು ಉಲ್ಲೇಖಿಸಿದ ಲಕ್ಷ್ಮಣ್ ರಾವ್ ಇನಾಮ್ದಾರ್ ಅವರು ಹುಟ್ಟಿದ್ದು 1917ರ ಸೆಪ್ಟೆಂಬರ್ 19ರಂದು. ಗುಜರಾತ್ನಲ್ಲಿ ಆರ್ಎಸ್ಎಸ್ನ ಸಂಸ್ಥಾಪಕ ಸದಸ್ಯರು. ರಾಜ್ಯದೆಲ್ಲೆಡೆ ಶಾಖಾಗಳನ್ನು ಸ್ಥಾಪಿಸಲು ಅಪಾರ ಪರಿಶ್ರಮ ವಹಿಸಿದ್ದರು. ನರೇಂದ್ರ ಮೋದಿಯವರನ್ನು 8ನೇ ವಯಸ್ಸಿನಲ್ಲಿ ಬಾಲಸ್ವಯಂಸೇವಕನನ್ನಾಗಿ ಆರ್ಎಸ್ಎಸ್ಗೆ ಸೇರಿಸಿಕೊಂಡಿದ್ದು ಇದೇ ಲಕ್ಷ್ಮಣ್ ಇನಾಮ್ದಾರ್.
ಬಳಿಕ 1980ರ ದಶಕದಲ್ಲಿ ಮೋದಿಯವರು ರಾಜಕೀಯ ಪ್ರವೇಶದ ಹೊಸ್ತಿಲಲ್ಲಿ ಇದ್ದಾಗಲೂ ಲಕ್ಷ್ಮಣ್ ರಾವ್ ಇನಾಮ್ದಾರ್ ಅವರೇ ಮೆಂಟರ್ ಆಗಿದ್ದುಕೊಂಡು, ಸಲಹೆ-ಸೂಚನೆ ಕೊಟ್ಟಿದ್ದರು. ಆರ್ಎಸ್ಎಸ್ನ ತಳಮಟ್ಟದ ಚಟುವಟಿಕೆಗಳಲ್ಲೂ ಮೋದಿಯವರನ್ನು ಇವರು ಸಕ್ರಿಯವಾಗಿಸಿಕೊಂಡಿದ್ದಾರೆ. ಆರ್ಎಸ್ಎಸ್ನ ಪ್ರಬಲ ನಾಯಕರಾಗಿದ್ದ ಲಕ್ಷ್ಮಣ್ ರಾವ್ ಇನಾಮ್ದಾರ್ ಅವರು ಮೋದಿಯವರಿಗೆ ಅದೆಷ್ಟು ಒತ್ತಾಸೆಯಾಗಿ ನಿಂತಿದ್ದರು ಎಂದರೆ, ನರೇಂದ್ರ ಮೋದಿಯನ್ನು ಲಕ್ಷ್ಮಣ್ ರಾವ್ರ ಮಾನಸ ಪುತ್ರ ಎಂದೇ ಆರ್ಎಸ್ಎಸ್ ವಲಯದಲ್ಲಿ ಕರೆಯಲಾಗುತ್ತಿತ್ತು ಎಂದು ರಾಜಕೀಯ ಚರಿತ್ರೆಕಾರ ಕಿಂಗ್ಶುಕ್ ನಾಗ್ ಹೇಳಿದ್ದರು.