Site icon Vistara News

ಉಪರಾಷ್ಟ್ರಪತಿ ಚುನಾವಣೆ; ರಾಹುಲ್‌, ಪವಾರ್‌ ಜತೆ ತೆರಳಿ ನಾಮಪತ್ರ ಸಲ್ಲಿಸಿದ ಮಾರ್ಗರೆಟ್‌ ಆಳ್ವಾ

Margaret Alva

ನವ ದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿರುವ ಮಾರ್ಗರೆಟ್‌ ಆಳ್ವಾ ಇಂದು ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಸಿಪಿಎಂ ಪಕ್ಷದ ಸೀತಾರಾಮ್‌ ಯೆಚೂರಿ, ಸಿಪಿಐ ಡಿ. ರಾಜಾ ಮತ್ತಿತರರು ಇದ್ದರು. ಆಗಸ್ಟ್‌ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿತ್ತು. ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಜಗದೀಪ್‌ ಧನಕರ್‌ ಅವರು ನಿನ್ನೆ (ಜುಲೈ 18)ರಂದು ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಪ್ರಧಾನಿ ಮೋದಿ, ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಇತರರು ಇದ್ದರು.

ಈಗಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರ ಅವಧಿ ಆಗಸ್ಟ್‌ 10 ರಂದು ಮುಕ್ತಾಯಗೊಳ್ಳಲಿದೆ. ಅದಕ್ಕೂ ಮೊದಲು ಚುನಾವಣೆ ನಡೆಯಲಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದವರು ರಾಜ್ಯಸಭೆಯ ಅಧ್ಯಕ್ಷರೂ ಆಗುತ್ತಾರೆ. ಎನ್‌ಡಿಎ ಒಕ್ಕೂಟ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‌ ಧನಕರ್‌ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಂಡರೆ, ಪ್ರತಿಪಕ್ಷಗಳೆಲ್ಲ ಸೇರಿ, ಕಾಂಗ್ರೆಸ್‌ನ ಹಿರಿಯ ನಾಯಕಿ ಮಾರ್ಗರೆಟ್‌ ಆಳ್ವಾರಿಗೆ ಮಣೆ ಹಾಕಿವೆ. ಇಲ್ಲಿಯೂ ಸಹ ಎನ್‌ಡಿಎ ಅಭ್ಯರ್ಥಿಯೇ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

ಮಾರ್ಗರೆಟ್‌ ಆಳ್ವಾ ಒಂದು ಕಾಲದಲ್ಲಿ ಅತ್ಯಂತ ಪ್ರಚಲಿತದಲ್ಲಿದ್ದ ಪ್ರಭಾವಿ ಹೆಸರು. ಕಾಂಗ್ರೆಸ್‌ನ ಈ ಹಿರಿಯ ನಾಯಕಿಗೆ ಈಗ 80ವರ್ಷ. ಇತ್ತೀಚೆಗೆ ತೆರೆಮರೆಗೆ ಸರಿದಿದ್ದ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯ ನೆಪದಲ್ಲಿ ಮತ್ತೆ ಮುನ್ನೆಲೆಗೆ ಕರೆದುಕೊಂಡು ಬಂದಿದ್ದು ಪ್ರತಿಪಕ್ಷಗಳು. ರಾಷ್ಟ್ರಪತಿ ಅಭ್ಯರ್ಥಿಯನ್ನು ಜಂಟಿಯಾಗಿ ಆಯ್ಕೆ ಮಾಡಿದ 17ಪ್ರತಿಪಕ್ಷಗಳೇ ಈಗ ಉಪರಾಷ್ಟ್ರಪತಿ ಹುದ್ದೆಗೆ ಮಾರ್ಗರೆಟ್‌ ಆಳ್ವಾರನ್ನು ಆಯ್ಕೆ ಮಾಡಿಕೊಂಡಿವೆ. ಸುಮಾರು 30ವರ್ಷಗಳ ಕಾಲ ಸಂಸದರಾಗಿದ್ದ ಆಳ್ವಾ, ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ವಿವಿಧ ಇಲಾಖೆಗ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಸಂಸದೀಯ ವ್ಯವಹಾರಗಳ ಇಲಾಖೆ ಸಚಿವರಾದರು. ನಂತರದ ದಿನಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಯುವ ವ್ಯವಹಾರಗಳು ಮತ್ತು ಕ್ರೀಡೆಗಳು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಸ್ತುವಾರಿಯನ್ನೂ ನಿಭಾಯಿಸಿದರು. ಉತ್ತರಾಖಂಡ್‌, ರಾಜಸ್ಥಾನ, ಗುಜರಾತ್‌ ಮತ್ತು ಗೋವಾ ರಾಜ್ಯಗಳ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: Vice President Election | ಕನ್ನಡತಿ, ಮಾಜಿ ಕೇಂದ್ರ ಸಚಿವೆ ಮಾರ್ಗರೆಟ್‌ ಆಳ್ವಾ UPA ಉಪರಾಷ್ಟ್ರಪತಿ ಅಭ್ಯರ್ಥಿ

Exit mobile version