Site icon Vistara News

ಮತದಾನ ಮಾಡಲ್ಲವೆಂದ ಟಿಎಂಸಿಗೆ ಮಾರ್ಗರೆಟ್‌ ಆಳ್ವಾರಿಂದ ಒಗ್ಗಟ್ಟಿನ ಪಾಠ; ದೀದಿ ಮನ ಕರಗುವುದೇ?

Margaret Alva

ನವ ದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್‌ ನೀಡಿರುವ ಹೇಳಿಕೆಗೆ ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್‌ ಆಳ್ವಾ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್‌ ಮಾಡಿರುವ ಮಾರ್ಗರೆಟ್‌ ಆಳ್ವಾ, ʼಉಪರಾಷ್ಟ್ರಪತಿ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಮತದಾನದಿಂದ ದೂರ ಉಳಿಯುವುದಾಗಿ ಹೇಳಿದ್ದರಿಂದ ಬೇಸರವಾಗಿದೆ. ಪೂರ್ವಾಗ್ರಹ ಪೀಡಿತವಾಗಿ ದೂಷಣೆ ಮಾಡುವುದಕ್ಕೆ, ಅಹಂಕಾರ ತೋರಿಸುವುದಕ್ಕೆ ಅಥವಾ ಸಿಟ್ಟು ಪ್ರದರ್ಶನಕ್ಕೆ ಇದು ಸರಿಯಾದ ಸಮಯವಲ್ಲ. ನಾವೆಲ್ಲರೂ ಒಂದಾಗಿ ನಮ್ಮಲ್ಲಿನ ಧೈರ್ಯ, ನಾಯಕತ್ವ ಮತ್ತು ಒಗ್ಗಟ್ಟನ್ನು ತೋರಿಸುವ ಕಾಲ. ಧೈರ್ಯ-ಸ್ಥೈರ್ಯಕ್ಕೆ ಪರ್ಯಾಯದಂತೆ ಇರುವ ಮಮತಾ ಬ್ಯಾನರ್ಜಿ ಈಗಲೂ ಖಂಡಿತ ನಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ ನನಗೆ ಇದೆʼ ಎಂದು ಹೇಳಿದ್ದಾರೆ.

ಮಾರ್ಗರೆಟ್‌ ಆಳ್ವಾರನ್ನು ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುತ್ತೇವೆ ಎಂಬುದನ್ನು ನಮಗೆ ತಿಳಿಸಿಯೇ ಇಲ್ಲ. ನಮ್ಮೊಂದಿಗೆ ಚರ್ಚಿಸದೆ, ನಮ್ಮ ಗಮನಕ್ಕೆ ತರದೆ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಹಾಗಾಗಿ ನಾವು ಮತದಾನ ಮಾಡುವುದಿಲ್ಲ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಜುಲೈ 21ರಂದು ಹೇಳಿಕೆ ನೀಡಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಜುಲೈ 21ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅಭಿಷೇಕ್‌ ಬ್ಯಾನರ್ಜಿ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ ಮಾರ್ಗರೆಟ್‌ ಆಳ್ವಾ ಟ್ವೀಟ್‌ ಮಾಡಿ, ಬೆಂಬಲ ಕೋರಿದ್ದಾರೆ. ಹಾಗೇ, ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಇದನ್ನೂ ಓದಿ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲ್ಲ ಎಂದ ಮಮತಾ ಬ್ಯಾನರ್ಜಿ ಪಕ್ಷ; ಅಸಮಾಧಾನವಂತೆ !

Exit mobile version