ಬೆಂಗಳೂರು: ಹಿಂದು ಧರ್ಮದಲ್ಲಿ ಮದುವೆಯೆಂದರೆ (Marriage) ಸಂಸ್ಕಾರ. ಅದು ಅನುಭೋಗಕ್ಕೆ ಇರುವ ಸಾಧನವಲ್ಲ ಎಂಬುದಾಗಿ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಹೊಸಬಾಳೆ ಅವರು ಅಭಿಪ್ರಾಯಪಟ್ಟಿದ್ದಾರೆ. ಸಲಿಂಗಿಗಳ ಮದುವೆಗೆ ವಿರೋಧಿಸಿ ಕೇಂದ್ರ ಸರಕಾರ ಸುಪ್ರೀಮ್ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರದ ನಿರ್ಧಾರಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪೂರ್ಣ ಬೆಂಬಲವಿದೆ ಎಂದ ಹೇಳಿದ್ದಾರೆ.
ವಿವಾಹ ಪರಸ್ಪರ ವಿರುದ್ಧ ಲಿಂಗಿಗಳ ನಡುವೆ ಮಾತ್ರ ನಡೆಯಬೇಕು ಎಂಬ ಕೇಂದ್ರ ಸರಕಾರದ ಅಭಿಪ್ರಾಯ ಸರಿಯಾಗಿದೆ ಎಂದು ದತ್ತಾತ್ರೆಯ ಹೊಸಬಾಳೆ ಹೇಳಿದ್ದಾರೆ. “ಮದುವೆ ಹೆಣ್ಣು ಮತ್ತು ಗಂಡಿನ ನಡುವೆ ನಡೆಯಬೇಕು. ಹಿಂದು ತತ್ವಶಾಸ್ತ್ರದಲ್ಲಿ ವಿವಾಹ ಒಂದು ಸಂಸ್ಕಾರ. ಖುಷಿ ಪಡಲು ಇರುವ ಸಾಧನವಲ್ಲ. ಅದೊಂದು ಗುತ್ತಿಗೆಯೂ ಅಲ್ಲ. ಸಹಸ್ರಾರು ವರ್ಷಗಳಿಂದ ನಾವು ಅದನ್ನು ಸಂಸ್ಕಾರ ಎಂದೇ ನಂಬಿಕೊಂಡು ಬರಲಾಗಿದೆ. ಅಂದರೆ ಇಬ್ಬರು ವಿವಾಹ ಸಂಬಂಧಕ್ಕೆ ಒಳಗಾಗಿ ಜತೆಯಾಗಿ ಬಾಳುವುದು ತಮಗಾಗಿ ಮಾತ್ರವಲ್ಲ, ಕುಟುಂಬಕ್ಕಾಗಿ ಹಾಗೂ ಸ್ವಸ್ಥ ಸಮಾಜಕ್ಕಾಗಿ” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಹೊಸಬಾಳೆ ಅವರು ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆಯನ್ನೂ ಕೊನೆಗಾಣಿಸಬೇಕು ಎಂದು ಹೇಳಿದರು.
ಇದನ್ನೂ ಓದಿ : ಸಲಿಂಗ ವಿವಾಹ ಸಾಧ್ಯವಿಲ್ಲ, ರಾಹುಲ್ ಜವಾಬ್ದಾರಿಯಿಂದ ಮಾತನಾಡಲಿ: ಆರೆಸ್ಸೆಸ್
ಕಳೆದ ಭಾನುವಾರ (ಮಾರ್ಚ್ 12ರಂದು) ಕೇಂದ್ರ ಸರಕಾರ ಸಲಿಂಗಿಗಳ ವಿವಾಹದಿಂದ ಅಧ್ವಾನಕ್ಕೆ ಕಾರಣವಾಗುತ್ತದೆ. ವೈಯಕ್ತಿಕ ಕಾನೂನಿನ ಅಸಮತೋಲನಕ್ಕೂ ಕಾರಣವಾಗುತ್ತದೆ. ಜತೆಗೆ ಸಾಮಾಜಿಕ ಮೌಲ್ಯವೂ ಕುಸಿಯುತ್ತಿದೆ ಎಂದು ಸುಪ್ರೀಮ್ ಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ ಮಾಡಿತ್ತು. ಏತನ್ಮಧ್ಯೆ, ಸಲಿಂಗಿಗಳ ವಿವಾಹವನ್ನು ಕಾನೂನುಬದ್ಧಗೊಳಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟ್, ಐವರು ನ್ಯಾಯಮೂರ್ತಿಗಳು ಇರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.