ತಿರುವನಂತಪುರಂ: ಚೀನಾ ಮತ್ತಿತರ ದೇಶಗಳಲ್ಲಿ ಕೊರೊನಾ ಹೆಚ್ಚಳವಾದ ಬೆನ್ನಲ್ಲೇ ಭಾರತದಲ್ಲಿ ಕೂಡ ಆತಂಕ ಶುರುವಾಗಿದೆ. ಮೂಲೆ ಸೇರಿದ್ದ ಮಾಸ್ಕ್ ಗಳೆಲ್ಲ ಮತ್ತೆ ಮೂಗಿನ ಮೇಲೆ ಏರಲು ಪ್ರಾರಂಭವಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂಬ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸದೆ ಇದ್ದರೂ ತುಂಬಾ ಜನರು ಇರುವ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಎಂದು ಇತ್ತೀಚೆಗೆ ಹೇಳಿತ್ತು. ಹಾಗಂತ ಇಲ್ಲಿಯವರೆಗೆ ಯಾವುದೇ ರಾಜ್ಯಗಳೂ ಮಾಸ್ಕ್ ಕಡ್ಡಾಯ ಮಾಡಿರಲಿಲ್ಲ. ಆದರೆ ಈಗ ಕೇರಳ ಸರ್ಕಾರ ಈ ಕ್ರಮ ಕೈಗೊಂಡಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಜನಸಂದಣಿ, ಗುಂಪುಗಳು ಇರುವ ಎಲ್ಲ ಕಡೆಗಳಲ್ಲೂ ಮಾಸ್ಕ್ ಧರಿಸಿರಬೇಕು, ಕಾರೊಳಗೆ ಮೂರ್ನಾಲ್ಕು ಜನರಿದ್ದರೂ ಮಾಸ್ಕ್ ಬೇಕೇಬೇಕು ಎಂದು ಆದೇಶಿಸಿರುವ ಕೇರಳ ಸರ್ಕಾರ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಜನರಿಗೆ ಸೂಚಿಸಿದೆ. ಹಾಗೇ, ಸಿನಿಮಾ ಹಾಲ್ ಗಳಲ್ಲಿ, ಮಳಿಗೆಗಳಲ್ಲೆಲ್ಲ ಮತ್ತೆ ಮೊದಲಿನಂತೆ ಸಾರ್ವಜನಿಕರಿಗಾಗಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು ಎಂದೂ ಸೂಚನೆ ಹೊರಡಿಸಿದೆ. ಮುಂದಿನ 30 ದಿನಗಳವರೆಗೆ ಈ ಆದೇಶದಲ್ಲಿ ಬದಲಾವಣೆ ಇಲ್ಲ. ಕೊವಿಡ್ ಜಾಸ್ತಿ ಆದರೆ ಮತ್ತಷ್ಟು ಬಿಗಿ ಕ್ರಮ ವಹಿಸಲಾಗುವುದು ಎಂದು ಸರ್ಕಾರ ಹೇಳಿದೆ
ಭಾರತದಲ್ಲಿ ಸೋಮವಾರ 114 ಹೊಸ ಕೊವಿಡ್ 19 ಕೇಸ್ ಗಳು ದಾಖಲಾಗಿವೆ. ಸಕ್ರಿಯ ಪ್ರಕರಣ ಸಂಖ್ಯೆ 2119ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ. 98.80ರಷ್ಟಿದೆ. ಕೊವಿಡ್ 19 ಸೋಂಕಿನ ವಿಷಯದಲ್ಲಿ ನಿರ್ಲಕ್ಷ್ಯ. ಬೇಡ ಎಂದು ಆರೋಗ್ಯ ತಜ್ಞರು ಪದೇಪದೆ ಎಚ್ಚರಿಸುತ್ತಿದ್ದಾರೆ.