ಕೊಟ್ಟಾಯಂ: ಉದ್ಯೋಗಸ್ಥ ಮಹಿಳೆಯರು ಕನಿಷ್ಠ ಮೂರು ತಿಂಗಳಿಂದ, ಕೆಲವು ಷರತ್ತುಗಳು ಅನ್ವಯಿಸಿ ಗರಿಷ್ಠ 6ತಿಂಗಳವರೆಗೆ ಮಾತೃತ್ವ ರಜೆ ಪಡೆಯಬಹುದು ಎಂಬ ನಿಯಮ ಇದೆ. ಆದರೆ ಇದೇ ಮೊದಲ ಬಾರಿಗೆ ಕೇರಳದ ಮಹಾತ್ಮ ಗಾಂಧಿ ಯೂನಿವರ್ಸಿಟಿ (MGU) ವಿದ್ಯಾರ್ಥಿನಿಯರಿಗೂ ಮಾತೃತ್ವ ರಜೆ ಮಂಜೂರು ಮಾಡಿದೆ. 18 ವರ್ಷ ಮೇಲ್ಪಟ್ಟ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ 60 ದಿನಗಳು (2 ತಿಂಗಳು) ಹೆರಿಗೆ ರಜೆ ನೀಡುವುದಾಗಿ ಯೂನಿವರ್ಸಿಟಿ ತಿಳಿಸಿದೆ.
ಕೆಲವು ಯುವತಿಯರು ಮದುವೆ ಬಳಿಕವೂ ವ್ಯಾಸಂಗ ಮುಂದುವರಿಸುತ್ತಾರೆ. ಅವರು ಈ ಮಧ್ಯೆ ಗರ್ಭಿಣಿಯಾದರೆ ಹೆರಿಗೆ ಸಂದರ್ಭದಲ್ಲಿ ಅನಿವಾರ್ಯವಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾಗುತ್ತದೆ. ಅಂಥ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸ ಅರ್ಧಕ್ಕೆ ಕೈಬಿಡುವುದನ್ನು ತಪ್ಪಿಸುವ ಸಲುವಾಗಿಯೇ ವಿಶ್ವವಿದ್ಯಾನಿಲಯ ಈ ಹೆರಿಗೆ ರಜೆ ಕೊಡಲು ನಿರ್ಧರಿಸಿದೆ.
ಹೀಗೆ ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆ ನೀಡುವ ಸಂಬಂಧ ಸಮಗ್ರ ಅಧ್ಯಯನ ಮಾಡಲು ಮಹಾತ್ಮ ಗಾಂಧಿ ಯೂನಿವರ್ಸಿಟಿಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ರಜೆ ನೀಡುವಂತೆ ಈ ಕಮಿಟಿ ಶಿಫಾರಸ್ಸು ಮಾಡಿ ವರದಿ ನೀಡಿತ್ತು. ಅಂತಿಮವಾಗಿ ಡಿ.24ರಂದು ಉಪಕುಲಪತಿ ಸಿ.ಟಿ.ಅರವಿಂದ್ ಕುಮಾರ್ ನೇತೃತ್ವದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ವಿದ್ಯಾರ್ಥಿನಿಯರಿಗೆ 60 ದಿನಗಳ ಮಾತೃತ್ವ ರಜೆ ನೀಡಲು ತೀರ್ಮಾನಿಸಲಾಯಿತು.
ವಿದ್ಯಾರ್ಥಿನಿಯರಿಗೆ ನೀಡಲಾಗುವ 60 ದಿನಗಳ ಮಾತೃತ್ವ ರಜೆಯನ್ನು ಅವರು ಹೆರಿಗೆ ಪೂರ್ವದಲ್ಲೂ ತೆಗೆದುಕೊಳ್ಳಬಹುದು, ಹೆರಿಗೆ ನಂತರವೂ ತೆಗೆದುಕೊಳ್ಳಬಹುದು. ಆದರೆ ಅವರು ಒಂದು ಬಾರಿ ಮಾತ್ರ ತೆಗೆದುಕೊಳ್ಳಬೇಕಾಗಿರುತ್ತದೆ. ಒಂದನೇ ಹೆರಿಗೆ ಸಮಯದಲ್ಲೂ 60 ದಿನ ರಜಾ ತೆಗೆದುಕೊಂಡು ಮತ್ತೆ ಕಾಲೇಜು ಕಲಿಕೆ ಅವಧಿಯಲ್ಲೇ ಎರಡನೇ ಬಾರಿ ಗರ್ಭಿಣಿಯಾದರೆ ಈ ಎರಡನೇ ಅವಧಿಯಲ್ಲಿ ರಜೆ ಸಿಗುವುದಿಲ್ಲ ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಗರ್ಭಪಾತಕ್ಕೆ ಒಳಗಾದ ವಿದ್ಯಾರ್ಥಿನಿಯರಿಗೆ 14 ದಿನ ರಜಾ ನೀಡುವುದಾಗಿಯೂ ಯೂನಿವರ್ಸಿಟಿ ಹೇಳಿದೆ.
ಇದನ್ನೂ ಓದಿ: ಸರ್ಕಾರಿ ಮಹಿಳಾ ಗುತ್ತಿಗೆ ನೌಕರರಿಗೂ ಮಾತೃತ್ವ ರಜೆ ಘೋಷಣೆ