Site icon Vistara News

Rupert Murdoch: ಆಕೆಯ ಅತಿಯಾದ ಧಾರ್ಮಿಕತೆ ಸಹಿಸಲಾಗುತ್ತಿಲ್ಲ; 5ನೇ ಮದುವೆ ಇಲ್ಲ ಎಂದ ರೂಪರ್ಟ್ ಮುರ್ಡೋಕ್

media mogul Rupert Murdoch Called Off his 5 Marriage

#image_title

ಮಾಧ್ಯಮ ಉದ್ಯಮದ ಮೊಘಲ್ ಎನ್ನಿಸಿಕೊಂಡಿರುವ, ವಿಶ್ವದಾದ್ಯಂತ ತಮ್ಮ ಮೀಡಿಯಾ ಉದ್ಯಮವನ್ನು ವಿಸ್ತರಿಸಿರುವ ಬಿಲಿಯನೇರ್​ ರೂಪರ್ಟ್ ಮುರ್ಡೋಕ್ (Rupert Murdoch) ಅವರು ತಮ್ಮ 92ನೇ ವಯಸ್ಸಿನಲ್ಲಿ 5ನೇ ಮದುವೆಯಾಗುತ್ತಿರುವುದಾಗಿ ಕಳೆದ ತಿಂಗಳು ಘೋಷಿಸಿದ್ದರು. ರೇಡಿಯೋ ಹೋಸ್ಟ್ ಮತ್ತು ಕಾರಾಗೃಹದಲ್ಲಿರುವ ಕೈದಿಗಳಿಗೆ ಧಾರ್ಮಿಕ ಬೋಧನೆ ಮಾಡುವ ಧರ್ಮಗುರು ​ಆನ್ ಲೆಸ್ಲಿ ಸ್ಮಿತ್ (66)ಅವರೊಂದಿಗೆ ಎಂಗೇಜ್​​ಮೆಂಟ್ ಮಾಡಿಕೊಂಡಿದ್ದಾಗಿಯೂ ಹೇಳಿದ್ದರು. ಆದರೆ ಈಗ ಬಂದಿರುವ ಸುದ್ದಿ ಪ್ರಕಾರ, ಅವರು ಈ ಮದುವೆಯಾಗುತ್ತಿಲ್ಲ ಮತ್ತು ಆನ್​ಲೆನ್ಲಿ ಸ್ಮಿತ್​ ಜತೆ ಮಾಡಿಕೊಂಡಿದ್ದ ನಿಶ್ಚಿತಾರ್ಥವನ್ನು ರದ್ದುಗೊಳಿಸಿಕೊಂಡಿದ್ದಾರೆ. ಈ ಬಗ್ಗೆ ನ್ಯೂಯಾರ್ಕ್​​ನ ಮ್ಯಾಗಜಿನ್​ ದಿ ಟೈಮ್ಸ್​ಗೆ ರೂಪರ್ಟ್ ಮುರ್ಡೋಕ್ ಅವರೇ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ರೂಪರ್ಟ್ ಮುರ್ಡೋಕ್ ಅವರು ​ಆನ್ ಲೆಸ್ಲಿ ಸ್ಮಿತ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೇ, ಈ ಬೇಸಿಗೆಯಲ್ಲಿ ಮದುವೆಯಾಗುವುದಾಗಿ ಹೇಳಿದ್ದರು. ಇದು ನನ್ನ ಕೊನೇ ಪ್ರೀತಿ ಎಂಬುದೂ ನಮಗೆ ಗೊತ್ತಿದೆ ಎಂದಿದ್ದರು. ನಿಶ್ಚಿತಾರ್ಥದ ದಿನ ರೂಪರ್ಟ್​ ಮುರ್ಡೋಕ್​ ಅವರು ಲೆಸ್ಲಿ ಅವರಿಗೆ ಡೈಮಂಡ್​ ಉಂಗುರವನ್ನು ತೊಡಿಸಿದ್ದರು. ಆದರೆ ಅದಾಗಿ ಎರಡೇ ವಾರದಲ್ಲಿ ‘ಇವರಿಬ್ಬರ ಮಧ್ಯೆ ಬ್ರೇಕ್​ಅಪ್​ ಆಗಿದೆ’ ಎಂಬ ಸುದ್ದಿಯೂ ಎದ್ದಿತ್ತು. ಆದರೆ ಖಚಿತವಾಗಿರಲಿಲ್ಲ. ಆದರೆ ಈಗೆರಡು ದಿನಗಳ ಹಿಂದೆ ರೂಪರ್ಟ್ ಮುರ್ಡೋಕ್​ ಅವರು ಮಾಧ್ಯಗಳಿಗೆ ಹೇಳಿಕೆ ನೀಡಿದ್ದಾರೆ. ‘ಲೆಸ್ಲಿ ಅವರಿಗೆ ಜೀವನದ ಬಗ್ಗೆ ಇರುವ ಅತಿಯಾದ ಧಾರ್ಮಿಕ ದೃಷ್ಟಿಕೋನ, ಎಲ್ಲವನ್ನೂ ಧಾರ್ಮಿಕ/ಸಾಂಪ್ರದಾಯಿಕ ಆಯಾಮದಲ್ಲೇ ನೋಡುವ ರೀತಿ ನನಗೆ ಇಷ್ಟವಾಗಲಿಲ್ಲ. ನಾನು ಅವಳೊಂದಿಗೆ ಆರಾಮಾಗಿ ಇರುತ್ತೇನೆ ಎಂದು ಅನ್ನಿಸುತ್ತಿಲ್ಲ. ಹೀಗಾಗಿ ನಿಶ್ಚಿತಾರ್ಥ ರದ್ದು ಮಾಡಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

ರೂಪರ್ಟ್ ಮುರ್ಡೋಕ್ ಅವರು ಉದ್ಯಮದಲ್ಲಿ ಯಶಸ್ಸಿನ ತುತ್ತತುದಿಗೆ ಏರಿದ್ದಾರೆ. ಇವರು ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಿ ಆದರೂ, ಬಳಿಕ ಅಮೆರಿಕಕ್ಕೆ ಬಂದು ಉದ್ಯಮ ದಿಗ್ಗಜ ಎನ್ನಿಸಿದರು. ತಮ್ಮ ನ್ಯೂಸ್​ ಕಾರ್ಪೋರೇಟ್​ ಕಂಪನಿಯ ಮೂಲಕ ವಿಶ್ವದಾದ್ಯಂತ ನೂರಾರು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಬ್ಲಿಕೇಶನ್​ ಮಳಿಗೆಗಳನ್ನು ಸ್ಥಾಪಿಸಿದ್ದಾರೆ. ನ್ಯೂಯಾರ್ಕ್​​ನಲ್ಲಿರುವ ಫಾಕ್ಸ್​ನ್ಯೂಸ್​ ಮತ್ತು ಯುಕೆಯ ಟ್ಯಾಬ್​ಲ್ಯಾಯ್ಡ್​​ ಮಾಧ್ಯಮ ಸನ್​ ಕೂಡ ಇವರ ಒಡೆತನದ್ದೇ.

ಇಷ್ಟೆಲ್ಲ ಆದರೂ ಇವರ ವೈವಾಹಿಕ ಜೀವನದಲ್ಲಿ ಸ್ಥಿರತೆ ಇರಲಿಲ್ಲ. ಇವರ ಮೊದಲ ಪತ್ನಿ ಹೆಸರು ಪೆಟ್ರೀಷಿಯಾ ಬೂಕರ್​, ಇವರು ಆಸ್ಟ್ರೇಲಿಯಾದಲ್ಲಿ ವಿಮಾನ ಪರಿಚಾರಕಿಯಾಗಿದ್ದರು. ಅದಾದ ಬಳಿಕ ಸ್ಕಾಟಿಕ್​​ ಪತ್ರಕರ್ತೆ ಅನ್ನಾಮನ್​​ರೊಂದಿಗೆ ಮದುವೆಯಾದರು. ನಂತರ ಅವರಿಗೂ ಡಿವೋರ್ಸ್​ ಕೊಟ್ಟು, ಚೀನಾದ ಉದ್ಯಮಿ ವೆಂಡಿ ಡೆಂಗ್​​ರನ್ನು ವಿವಾಹ ಮಾಡಿಕೊಂಡಿದ್ದರು. ಅವರನ್ನು ಬಿಟ್ಟು ನಟಿ ಜೆರ್ರಿ ಹಾಲ್​​ರೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ 8 ತಿಂಗಳ ಹಿಂದೆ ಅವರಿಗೂ ಡಿವೋರ್ಸ್​ ಕೊಟ್ಟಿದ್ದರು. ಹೀಗೆ ಎಂಟು ತಿಂಗಳ ನಂತರ ತಾವು ಇನ್ನೊಂದು ಮದುವೆಯಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Rupert Murdoch: 92ನೇ ವಯಸ್ಸಲ್ಲಿ ಕೊನೇ ಪ್ರೀತಿ ಕಂಡುಕೊಂಡ ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್; ಶೀಘ್ರದಲ್ಲೇ 5ನೇ ಮದುವೆ

ಇನ್ನು ಆನ್ ಲೆಸ್ಲಿ ಸ್ಮಿತ್​ ಅವರು ತಮ್ಮ ಪತಿ ಚೆಸ್ಟರ್ ಸ್ಮಿತ್ ತೀರಿಕೊಂಡ ಬಳಿಕ ಒಬ್ಬಂಟಿಯಾಗಿದ್ದರು. ಜನವರಿಯಲ್ಲಿ ಮೊದಲಬಾರಿಗೆ ರೂಪರ್ಟ್​ ಮುರ್ಡೋಕ್​ ಮತ್ತು ಇವರ ಭೇಟಿಯಾಗಿತ್ತು. ರೂಪರ್ಟ್ ಜತೆ ಎಂಗೇಜ್​ಮೆಂಟ್ ಆದ ಬೆನ್ನಲ್ಲೇ ಖುಷಿಯಿಂದ ಪೋಸ್ಟ್ ಹಾಕಿದ್ದ ಅವರು ‘ನಾನು 14ವರ್ಷಗಳಿಂದ ವಿಧವೆ. ರೂಪರ್ಟ್ ಅವರಂತೆ ನನ್ನ ಪತಿಯೂ ಮಾಧ್ಯಮ ಕ್ಷೇತ್ರದಲ್ಲೇ ಉದ್ಯಮಿಯಾಗಿದ್ದರು. ಸ್ಥಳೀಯವಾಗಿ ಹಲವು ಪತ್ರಿಕೆಗಳು, ರೇಡಿಯೊ, ಟಿವಿ ಸ್ಟೇಶನ್​​ಗಳನ್ನು ಹುಟ್ಟುಹಾಕಿದ್ದಾರೆ. ಹೀಗಾಗಿ ನಾನು ರೂಪರ್ಟ್​ರನ್ನು, ಅವರ ಕ್ಷೇತ್ರವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ’ ಎಂದಿದ್ದರು.

Exit mobile version