ನವ ದೆಹಲಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಂದ ನಂತರ ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲ ವರ್ಗದಲ್ಲಿಯೂ ಗಣನೀಯ ಅಭಿವೃದ್ಧಿಯಾಗಿದೆ. ವೈದ್ಯಕೀಯ ಶಿಕ್ಷಣದ ವಿಚಾರದಲ್ಲಂತೂ ಸಾಕಷ್ಟು ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಸರ್ಕಾರದ ವರದಿಯ ಪ್ರಕಾರ ದೇಶದಲ್ಲಿ 2014ರಲ್ಲಿದ್ದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ (Medical Colleges) ಹೋಲಿಸಿದರೆ 2023ರಲ್ಲಿ ಅವುಗಳ ಸಂಖ್ಯೆ ದುಪ್ಪಟ್ಟಾಗಿದೆ.
ಇದನ್ನೂ ಓದಿ: Internship Allowance: ಇಂಟರ್ನ್‌ಶಿಪ್ ಭತ್ಯೆ ಹೆಚ್ಚಿಸಲು ಆಗ್ರಹ: ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ
2014ರಲ್ಲಿ ದೇಶದಲ್ಲಿ ಒಟ್ಟು 387 ವೈದ್ಯಕೀಯ ಕಾಲೇಜುಗಳಿದ್ದವು. ಅವು 2023ರಲ್ಲಿ 660ಕ್ಕೆ ಏರಿಕೆಯಾಗಿದೆ. ಹಾಗೆಯೇ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಎಐಐಎಂಎಸ್) ಕಾಲೇಜುಗಳು 2014ರಲ್ಲಿ ಏಳಿದ್ದವು. ಅವು ಈಗ 22 ಆಗಿವೆ ಎಂದು ಕೇಂದ್ರ ಸರ್ಕಾರ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
ಹಾಗೆಯೇ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆಯಲ್ಲೂ ಕೂಡ ಗಣನೀಯ ಏರಿಕೆ ದಾಖಲೆಯಾಗಿದೆ. 2014ರಲ್ಲಿ ದೇಶದಲ್ಲಿ ಒಟ್ಟು 31,185 ವೈದ್ಯಕೀಯ ಶಿಕ್ಷಣ ಸ್ನಾತಕೋತ್ತರ ಪದವಿ ಸೀಟುಗಳು ಇದ್ದವು. ಅವು ಈ ವರ್ಷ 65,335ಕ್ಕೆ ಏರಿಕೆಯಾಗಿದೆ. ಅದೇ ರೀತಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 51,348ರಿಂದ 1,01,043ಕ್ಕೆ ಏರಿಕೆಯಾಗಿದೆ.