Site icon Vistara News

ಜಾಮಿಯಾ ಮಸೀದಿ ಎದುರಿನ ಹುಲ್ಲುಹಾಸಿನ ಮೇಲೆ ಮಹಿಳೆ-ಪುರುಷ ಒಟ್ಟಾಗಿ ಕುಳಿತುಕೊಳ್ಳುವಂತಿಲ್ಲ; ಫೋಟೋ ತೆಗೆಯುವಂತಿಲ್ಲ

men and women are not allowed to sit together in lawn of Jamia Masjid

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಜಾಮಿಯಾ ಮಸೀದಿ ಸುತ್ತಲಿನ ಹುಲ್ಲುಹಾಸಿನ ಮೇಲೆ ಮಹಿಳೆ ಮತ್ತು ಪುರುಷ ಒಟ್ಟಾಗಿ ಕುಳಿತುಕೊಳ್ಳುವಂತಿಲ್ಲ ಎಂದು ಮಸೀದಿ ಆಡಳಿತ ಅಧಿಸೂಚನೆ ಹೊರಡಿಸಿದೆ. ಅಷ್ಟೇ ಅಲ್ಲ, ಐತಿಹಾಸಿಕ ಜಾಮಿಯಾ ಮಸೀದಿ ಒಳಗೆ ಫೋಟೋ ತೆಗೆಯುವಂತಿಲ್ಲ ಎಂಬ ನಿರ್ಬಂಧವನ್ನೂ ವಿಧಿಸಲಾಗಿದೆ. ‘ಮಸೀದಿಯ ಒಳಗೆ ಛಾಯಚಿತ್ರ/ವಿಡಿಯೊ ಸೆರೆ ಹಿಡಿಯುವಂತೆಯೇ ಇಲ್ಲ. ಮೊಬೈಲ್​ ಫೋಟೋ ಕ್ಲಿಕ್ಕಿಸಲೂ ಅವಕಾಶವಿಲ್ಲ. ಯಾರಾದರೂ ಕ್ಯಾಮರಾ ಸಹಿತ ಬಂದರೆ ಅವರನ್ನು ಗೇಟ್​ ಬಳಿಯೇ ನಿಲ್ಲಿಸಲಾಗುವುದು’ ಎಂದು ಮಸೀದಿ ಹೇಳಿದ್ದು, ‘ಯಾವುದೇ ರೀತಿಯ ವೃತ್ತಿಪರ ಕಾರಣಕ್ಕೆ ಯಾರಿಗಾದರೂ ಫೋಟೋ/ವಿಡಿಯೊ ಅಗತ್ಯವಿದ್ದರೆ ಅಂಥವರು ಮಸೀದಿ ಆಡಳಿತದಿಂದ ಅನುಮತಿ ಪಡೆಯಬೇಕು’ ಎಂದು ಹೇಳಲಾಗಿದೆ.

ಅಷ್ಟೇ ಅಲ್ಲ, ಮಸೀದಿ ಒಳಗೆ ಯಾರೂ ಏನನ್ನೂ ತಿನ್ನಬಾರದು. ಅಲ್ಲಿ ತಿಂಡಿ/ಊಟ ಮಾಡುವುದನ್ನೂ ನಿರ್ಬಂಧಿಸಲಾಗಿದೆ. ಯಾರಾದರೂ ತಿಂಡಿ/ಊಟ ತಂದಿದ್ದು ಕಂಡುಬಂದರೆ ಅವರನ್ನೂ ಗೇಟ್​ ಬಳಿಯೇ ನಿಲ್ಲಿಸಲಾಗುವುದು. ಇದೊಂದು ಪೂಜಾಸ್ಥಳ ಆಗಿದ್ದರಿಂದ ಪಾವಿತ್ರ್ಯತೆ ಕಾಪಾಡುವ ಅಗತ್ಯವಿದೆ. ಇದು ಸಾರ್ವಜನಿಕ ಉದ್ಯಾನವನವೂ ಅಲ್ಲ, ಮನರಂಜನಾ ಸ್ಥಳವೂ ಅಲ್ಲ ಎಂಬುದನ್ನು ಪ್ರವಾಸಿಗರು ಗಮನದಲ್ಲಿ ಇಟ್ಟುಕೊಳ್ಳಬೇಕು. ಹಾಗೇ, ಮಹಿಳೆಯರು ಅವರಿಗಾಗಿ ಮೀಸಲಿಟ್ಟ ಜಾಗದಲ್ಲೇ ಪೂಜೆ ಸಲ್ಲಿಸಬೇಕು ಮತ್ತು ಪುರುಷರು ತಮಗೆ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಪ್ರಾರ್ಥನೆ-ಪೂಜೆ ಸಲ್ಲಿಸಬೇಕು. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಸೀದಿ ಅಧಿಸೂಚನೆಯಲ್ಲಿ ತಿಳಿಸಿದೆ. ಅಂದಹಾಗೇ, ಜಾಮಿಯಾ ಮಸೀದಿ ಇದೇ ಮೊದಲ ಬಾರಿಗೆ ಇಂಥ ನಿಯಮಗಳನ್ನು ಜಾರಿಗೊಳಿಸಿದೆ.

ಇದನ್ನೂ ಓದಿ:Kashmir Masjid Fire | ಕಾಶ್ಮೀರದಲ್ಲಿ ಜಾಮಿಯಾ ಮಸೀದಿಗೆ ಬೆಂಕಿ, ಬಹುತೇಕ ಭಾಗಕ್ಕೆ ಹಾನಿ

Exit mobile version