ಮುಂಬೈ: ಟಾಟಾ ಸನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸೆಪ್ಟೆಂಬರ್ 4ರಂದು ಗುಜರಾತ್ನ ಅಹ್ಮದಾಬಾದ್ನಿಂದ ಮುಂಬೈಗೆ ತೆರಳುತ್ತಿದ್ದಾಗ ಪಾಲ್ಘಾರ್ ಬಳಿ ಸೂರ್ಯನದಿ ಸೇತುವೆ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಂದು ಅವರು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಜಹಾಂಗೀರ್ ದಿನ್ಶಾ ಪಂಡೋಳೆ, ಡಾ.ಅನಾಹಿತ ಪಂಡೋಳೆ ಮತ್ತು ಡೇರಿಯಸ್ ಪಂಡೋಳೆ ಎಂಬುವರ ಜತೆ ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ ಡಾ. ಅನಾಹಿತ ಪಂಡೋಳೆ ಕಾರು ಚಲಾಯಿಸುತ್ತಿದ್ದರು. ಇವರು ಅತಿಯಾದ ವೇಗದಲ್ಲಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಹಾಗಿದ್ದಾಗ್ಯೂ ಇವರೆಲ್ಲ ಪ್ರಯಾಣ ಮಾಡುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರ್ನಲ್ಲಿ ಏನಾದರೂ ತಾಂತ್ರಿಕ ದೋಷವಿತ್ತಾ? ಅತಿಯಾದ ವೇಗವೇ ಕಾರಣವೋ ಅಥವಾ ಕಾರಿನಲ್ಲಿದ್ದ ಸಮಸ್ಯೆ ಅಪಘಾತಕ್ಕೆ ಕಾರಣವೋ ಎಂಬುದನ್ನು ತನಿಖೆ ನಡೆಸಲು ಹಾಂಗ್ಕಾಂಗ್ನಿಂದ ನಾಲ್ವರು ಮರ್ಸಿಡಿಸ್ ತಜ್ಞರು ಥಾಣೆಯ ಶೋರೂಮಿಗೆ ಬಂದಿದ್ದಾರೆ. ಕಾರನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ ಅದರ ವರದಿಯನ್ನು ಅವರು ಮರ್ಸಿಡಿಸ್ ಬೆಂಜ್ ಕಂಪನಿಗೆ ನೀಡಲಿದ್ದಾರೆ. ಅಂದಹಾಗೇ, ಇವರನ್ನು ಹಾಂಗ್ಕಾಂಗ್ನಿಂದ ಭಾರತಕ್ಕೆ ಕಳಿಸಿದ್ದೇ ಮರ್ಸಿಡಿಸ್ ಬೆಂಜ್ ಕಂಪನಿ.
ಸೈರಸ್ ಮಿಸ್ತ್ರಿ ಕಾರು ಅಪಘಾತಕ್ಕೀಡಾದಾಗ ಅವರ ಕಾರ್ನಲ್ಲಿದ್ದ ಏರ್ಬ್ಯಾಗ್ ತೆರೆದುಕೊಳ್ಳಲಿಲ್ಲ ಎಂದು ಹೇಳಲಾಗಿದ್ದು, ಈ ಬಗ್ಗೆ ಪೊಲೀಸರು ಕಾರ್ ಕಂಪನಿಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಮರ್ಸಿಡಿಸ್ ಬೆಂಜ್ ಇಂಡಿಯಾ ‘ಗ್ರಾಹಕರ ಸುರಕ್ಷತೆಯನ್ನೇ ಆದ್ಯತೆಯನ್ನಾಗಿಟ್ಟುಕೊಂಡ ಕಂಪನಿ ನಮ್ಮದು. ಸೈರಸ್ ಮಿಸ್ತ್ರಿ ಕೇಸ್ನಲ್ಲಿ ನಮ್ಮ ಕಂಪನಿಯಿಂದ ಅಗತ್ಯವಿರುವ ಎಲ್ಲ ಮಾಹಿತಿಗಳನ್ನೂ ನೇರವಾಗಿ ಒದಗಿಸಲು ಸಿದ್ಧರಿದ್ದೇವೆ’ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಇದೀಗ ಹಾಂಗ್ಕಾಂಗ್ನಿಂದ ಎಕ್ಸ್ಪರ್ಟ್ಗಳ ತಂಡವೊಂದು ಭಾರತಕ್ಕೆ ಬಂದಿದೆ.
ಇದನ್ನೂ ಓದಿ: Cyrus Mistry Death | ಸೈರಸ್ ಮಿಸ್ತ್ರಿ ಸೀಟ್ ಬೆಲ್ಟ್ ಧರಿಸಿರಲಿಲ್ಲ, ಕೇವಲ 9 ನಿಮಿಷದಲ್ಲಿ 20 ಕಿ.ಮೀ ತಲುಪಿದ್ದ ಕಾರು