Site icon Vistara News

ಸಂಸತ್ತಿನಲ್ಲಿ ಅದಾನಿ ವಿಷಯ ತೆಗೆಯುತ್ತಿದ್ದಂತೆ ನಮ್ಮ ಮೈಕ್​ ಆಫ್​ ಆಗುತ್ತದೆ; ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡ ಮಲ್ಲಿಕಾರ್ಜುನ್​ ಖರ್ಗೆ

Mallikarjun Kharge

ನವ ದೆಹಲಿ: ಸಂಸತ್ತಿನಲ್ಲಿ ಬಜೆಟ್​ ಅಧಿವೇಶನದ ಎರಡನೇ ಹಂತ (Parliament Budget Session)ಇಂದು ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ಸಂಸದರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಲಂಡನ್​​ನಲ್ಲಿ ರಾಹುಲ್ ಗಾಂಧಿಯವರು ಭಾರತಕ್ಕೆ ಅವಮಾನ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಪಿಯೂಷ್ ಗೋಯೆಲ್​, ಪ್ರಲ್ಹಾದ್ ಜೋಶಿ ಮತ್ತಿತರರು ಗಟ್ಟಿಯಾಗಿ ಆಗ್ರಹಿಸಿದರು. ಆದರೆ ಇದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ರಾಜ್ಯಸಭೆ ಮತ್ತು ಲೋಕಸಭೆ ಎರಡೂ ಕಡೆ ಇದೇ ಆಯಿತು. ಹೀಗಾಗಿ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಯಿತು.

ಹೀಗೆ ಉಭಯ ಸದನಗಳ ಕಲಾಪ ಮುಂದೂಡಲ್ಪಡುತ್ತಿದ್ದಂತೆ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿಯವರದ್ದು ಸರ್ವಾಧಿಕಾರಿ ಸರ್ಕಾರ’ ಎಂದು ಹೇಳಿದರು. ‘ಯಾರು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೋ, ಹಾಳುಗೆಡವುತ್ತಿದ್ದಾರೋ, ಅವರೀಗ ಪ್ರಜಾಪ್ರಭುತ್ವ, ದೇಶದ ಗೌರವ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಕೇಂದ್ರ ಬಿಜೆಪಿ ನಾಯಕರನ್ನು ವ್ಯಂಗ್ಯ ಮಾಡಿದರು.

ಇದನ್ನೂ ಓದಿ: Aero India 2023: ಏರೋ ಇಂಡಿಯಾದಿಂದ ಕರ್ನಾಟಕದ ಯುವಕರಿಗೆ ಹೆಚ್ಚಿನ ಉದ್ಯೋಗ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಅಷ್ಟೇ ಅಲ್ಲ, ‘ನಾವು ಸದನಗಳಲ್ಲಿ ಅದಾನಿ ಷೇರು ಕುಸಿತದ ವಿಷಯ ಎತ್ತುತ್ತಿದ್ದಂತೆ ನಮ್ಮ ಮೈಕ್​ಗಳನ್ನು ಆಫ್​ ಮಾಡಲಾಗುತ್ತದೆ. ಅದಾನಿ ಹಗರಣದ ಬಗ್ಗೆ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ರಚನೆ ಮಾಡಿ ಎಂದು ನಾವು ಆಗ್ರಹಿಸುತ್ತಿದ್ದೇವೆ. ಆಗೆಲ್ಲ ನಮ್ಮ ಮೈಕ್​​ಗಳು ಆಫ್​ ಆಗುತ್ತವೆ ಮತ್ತು ಸದನದಲ್ಲಿ ದೊಡ್ಡಮಟ್ಟದ ಗಲಾಟೆ ಸ್ಫೋಟಗೊಳ್ಳುತ್ತದೆ. ರಾಹುಲ್ ಗಾಂಧಿಯವರು ಈ ಹಿಂದೆ ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಏನೇನೆಲ್ಲ ಹೇಳಿದ್ದರೋ, ಅದನ್ನೇ ಲಂಡನ್​​ನಲ್ಲಿ ಹೇಳಿದ್ದಾರೆ’ ಎಂದು ಖರ್ಗೆ ಹೇಳಿದರು. ಮಲ್ಲಿಕಾರ್ಜುನ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಭಾರತ್ ರಾಷ್ಟ್ರ ಸಮಿತಿ ಸದಸ್ಯರು ಇದ್ದರು.

ಇದನ್ನೂ ಓದಿ: Parliament budget session: ಲಂಡನ್‌ ಹೇಳಿಕೆಗಾಗಿ ರಾಹುಲ್‌ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ; ಸಂಸತ್ತಿನಲ್ಲಿ ಕೋಲಾಹಲ

Exit mobile version