Site icon Vistara News

ಮಣಿಪುರ ಸಚಿವೆ ಮನೆಗೂ ಬೆಂಕಿ ಇಟ್ಟ ಪ್ರತಿಭಟನಾಕಾರರು; ರಾಜ್ಯವನ್ನು ‘ಉರಿ’ಸುತ್ತಿದ್ದಾರೆ ಮೈತೈ-ಕುಕಿಗಳು

Manipur minister house set ablaze

#image_title

ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೊಡುವ ವಿಚಾರದ ಕಾರಣಕ್ಕೆ ಮಣಿಪುರದಲ್ಲಿ ಭುಗಿಲೆದ್ದಿರುವ ಸಂಘರ್ಷ (Manipur Violence) ತಣ್ಣಗಾಗುತ್ತಿಲ್ಲ. ಹಿಂಸಾಚಾರದ ಬಿಸಿ ಅಲ್ಲಿನ ಜನಪ್ರತಿನಿಧಿಗಳಿಗೂ ತಟ್ಟುತ್ತಿದೆ. ಈಗಾಗಲೇ ಹಲವು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡಿರುವ ಪ್ರತಿಭಟನಾಕಾರರು ಈಗ ಅಲ್ಲಿನ ಸಚಿವರಾದ ನೆಮ್ಚಾ ಕಿಪ್ಗೆನ್ ಅವರ ಮನೆಗೂ ಬೆಂಕಿಯಿಟ್ಟು, ಸುಟ್ಟಿದ್ದಾರೆ. ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಮೈತೈಗಳು ಆಗ್ರಹಿಸುತ್ತಿದ್ದರೆ, ಅವರು ಬುಡಕಟ್ಟು ಜನಾಂಗದವರು ಅಲ್ಲ, ಹಾಗಾಗಿ ಎಸ್​ಟಿ ಸ್ಥಾನಮಾವನ್ನು ಮೈತೈಗಳಿಗೆ ಕೊಡಲೇಬಾರದು ಎಂದು ಕುಕಿ ಸಮುದಾಯದವರು ಒತ್ತಾಯ ಮಾಡುತ್ತಿದ್ದಾರೆ. ಈ ಎರಡೂ ಸಮುದಾಯಗಳ ನಡುವಿನ ಸಂಘರ್ಷ ವಿಕೋಪಕ್ಕೆ ಏರಿದೆ.

ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನ ಮಣಿಪುರಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ಸಮಿತಿಯನ್ನೂ ರಚಿಸಲಾಗಿದೆ. ಅಲ್ಲಿ ರಾಜ್ಯ ಪೊಲೀಸರು, ಕೇಂದ್ರ ಸಶಸ್ತ್ರ ಪಡೆಗಳು, ಮಿಲಿಟರಿ ಸಿಬ್ಬಂದಿ ಬಿಗಿ ಬಂದೋಬಸ್ತ್​ ಮಾಡಿದ್ದಾರೆ. ಅಷ್ಟಾದರೂ ಪ್ರತಿಭಟನೆ ನಿಲ್ಲುತ್ತಿಲ್ಲ. ಒಂದು ಸಲ ತಹಬದಿಗೆ ಬಂದಂತೆ ಕಂಡರೂ ಮತ್ತೆಮತ್ತೆ ಅಲ್ಲಲ್ಲಿ ಹಿಂಸಾಚಾರ ನಡೆಯುತ್ತಿದೆ. ಮಂಗಳವಾರ ಖಾಮೇನ್​ಲೋಕ್​ ಏರಿಯಾದಲ್ಲಿ ಹೊಸದಾಗಿ ಫೈರಿಂಗ್ ನಡೆದಿತ್ತು. 9 ಮಂದಿ ಮೃತಪಟ್ಟು, 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಷ್ಟೇ ಅಲ್ಲ, ಗಲಭೆಕೋರರು ಆ ಹಳ್ಳಿಯ ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದೀಗ ಇಂಫಾಲ್​​ನಲ್ಲಿರುವ, ಸಚಿವೆಯ ಅಧಿಕೃತ ನಿವಾಸವೂ ಬೆಂಕಿಯಿಂದ ಸುಟ್ಟು ಬೂದಿಯಾಗಿದೆ.

ಇದನ್ನೂ ಓದಿ: ನಿಯಂತ್ರಣಕ್ಕೆ ಬಾರದ ಮಣಿಪುರ ಹಿಂಸಾಚಾರ; ಮತ್ತೆ ಫೈರಿಂಗ್​, 24 ಗಂಟೆಯಲ್ಲಿ 9 ಜನರ ಸಾವು

ಇನ್ನೊಂದೆಡೆ ಪೊಲೀಸರು, ರಕ್ಷಣಾ ಪಡೆಗಳು ಕೂಡ ಪ್ರತಿಭಟನಾಕಾರರನ್ನು ಹೆಡೆಮುರಿಕಟ್ಟುತ್ತಿದ್ದಾರೆ. ತೆಂಗ್ನೌಪಾಲ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಿಂದ ಕಳೆದ 24ಗಂಟೆಗಳಲ್ಲಿ ಸುಮಾರು 63 ಮದ್ದುಗುಂಡುಗಳು, ಪಿಸ್ತೂಲ್​, ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇಡೀ ರಾಜ್ಯಾದ್ಯಂತ ಇಲ್ಲಿಯವರೆಗೆ ಸುಮಾರು 1040 ಶಸ್ತ್ರಾಸ್ತ್ರಗಳು, 13,601 ಮದ್ದುಗುಂಡುಗಳು, 230 ವಿವಿಧ ಮಾದರಿಯ ಬಾಂಬ್​​ಗಳನ್ನು ವಶಪಡಿಸಿಕೊಂಡಿದ್ದಾಗಿ ಮಣಿಪುರ ಭದ್ರತಾ ಸಲಹೆಗಾರ ಕುಲದೀಪ್​ ಸಿಂಗ್ ತಿಳಿಸಿದ್ದಾರೆ.

Exit mobile version