ವಿಶಾಖಪಟ್ಟಣ: ಆಂಧ್ರಪ್ರದೇಶದ ಆಡಳಿತ ರೂಢ ಪಕ್ಷ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) ನಾಯಕಿ, ಪ್ರವಾಸೋದ್ಯಮಿ ಸಚಿವೆ ಆರ್.ಕೆ. ರೋಜಾ ಅವರ ಕಾರಿನ ಮೇಲೆ, ನಟ, ರಾಜಕಾರಣಿ (ಜನಸೇನಾ ಪಾರ್ಟಿ ಮುಖ್ಯಸ್ಥ) ಪವನ್ ಕಲ್ಯಾಣ್ ಬೆಂಬಲಿಗರಿಂದ ದಾಳಿಯಾಗಿದೆ.
ಅಷ್ಟೇ ಅಲ್ಲ, ವೈಎಸ್ಆರ್ ಕಾಂಗ್ರೆಸ್ನ ಇತರ ನಾಯಕ ಜೋಗಿ ರಮೇಶ್, ಆಂಧ್ರಪ್ರದೇಶ ತಿರುಮಲ ತಿರುಪತಿ ದೇವಸ್ಥಾನಂ ಮುಖ್ಯಸ್ಥ ವೈ.ವಿ.ಸುಬ್ಬಾ ರೆಡ್ಡಿ ಅವರ ವಾಹನಗಳ ಮೇಲೆ ಕೂಡ ಇವರು ಮುಗಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿಯವರ ಮೂರು ರಾಜಧಾನಿ ಪ್ರಸ್ತಾವನೆ ವಿರುದ್ಧ ಪವನ್ ಕಲ್ಯಾಣ್ ಬೆಂಬಲಿಗರು ತಿರುಗಿಬಿದ್ದಿದ್ದಾರೆ. ಅವರು ರೋಜಾ ಮತ್ತಿತರ ನಾಯಕರ ವಾಹನದ ಮೇಲೆ ವಿಶಾಖಪಟ್ಟಣದ ಏರ್ಪೋರ್ಟ್ ಬಳಿ ದಾಳಿ ಮಾಡಿದ್ದು, ಹೀಗೆ ಮಾಡುವಾಗಲೂ ಮೂರು ರಾಜಧಾನಿ ಬೇಡ ಎಂದೇ ಘೋಷಣೆ ಕೂಗುತ್ತಿದ್ದರು. ಬಳಿಕ ಪೊಲೀಸರು ಅವರನ್ನು ಚದುರಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳ ಪ್ರಸ್ತಾಪ ಇಟ್ಟಿರುವ ಅಲ್ಲಿನ ವೈಸ್ಆರ್ಸಿಪಿ ಸರ್ಕಾರ ವಿಶಾಖಪಟ್ಟಣವನ್ನು ಕಾರ್ಯಕಾರಿ ರಾಜಧಾನಿಯನ್ನಾಗಿ ಮಾರ್ಪಡಿಸಲು ನಿರ್ಧಾರ ಮಾಡಿದೆ. ಆದರೆ ಈ ಮೂರು ರಾಜಧಾನಿಗಳ ಕಲ್ಪನೆಗೆ ಜನ ಸೇನಾ ಪಾರ್ಟಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಮಧ್ಯೆ 3 ರಾಜಧಾನಿ ರಚನೆಗೆ ಆಂಧ್ರಪ್ರದೇಶದಲ್ಲಿ ಎಷ್ಟರ ಮಟ್ಟಿಗೆ ಜನಬೆಂಬಲವಿದೆ ಎಂಬುದನ್ನು ಪ್ರತಿಪಕ್ಷಗಳಿಗೆ, ವಿರೋಧಿಗಳಿಗೆ ತೋರಿಸುವ ಸಲುವಾಗಿ ವೈಎಸ್ಆರ್ ಕಾಂಗ್ರೆಸ್ನಿಂದ ವಿಶಾಖಪಟ್ಟಣದಲ್ಲಿ,‘ವಿಶಾಖ ಗರ್ಜನಾ’ ಎಂಬ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಈ ಸಮಾವೇಶದಲ್ಲಿ ವೈಎಸ್ಆರ್ಸಿಯ ಅನೇಕ ನಾಯಕರು, ಸಚಿವರು ಮತ್ತು ಮೂರು ರಾಜಧಾನಿ ರಚನೆಗೆ ಆಗ್ರಹಿಸುತ್ತಿರುವ ಜಂಟಿ ಕ್ರಿಯಾ ಸಮಿತಿ (Joint Action Committee) ಸದಸ್ಯರು ಪಾಲ್ಗೊಂಡಿದ್ದರು. ಗುಡುಗು, ಮಳೆಯ ಮಧ್ಯೆಯೂ ಭಾಷಣ, ಘೋಷಣೆಗಳು ಮೊಳಗಿದ್ದವು.
ಬೃಹತ್ ಱಲಿಯಲ್ಲಿ ಮಾತನಾಡಿದ ರೋಜಾ ‘ಪವನ್ ಕಲ್ಯಾಣ್ ವಿಶಾಖಪಟ್ಟಣದ ಹುಡುಗಿಯನ್ನೇ ಮದುವೆಯಾಗಿದ್ದಾರೆ. ತಮ್ಮ ಸಿನಿಮಾಗಳನ್ನು ಇಲ್ಲೇ ಬಿಡುಗಡೆ ಮಾಡಿ, ಯಶಸ್ಸು ಕಾಣುತ್ತಾರೆ. ಚುನಾವಣೆಯಲ್ಲಿ ಇಲ್ಲಿನ ಗಜುವಾಕಾದಿಂದ ಸ್ಪರ್ಧಿಸುತ್ತಾರೆ. ಇಷ್ಟೆಲ್ಲ ಆದರೂ ವಿಶಾಖಪಟ್ಟಣ ಆಂಧ್ರಪ್ರದೇಶ ಕಾರ್ಯಕಾರಿ ರಾಜಧಾನಿ ಆಗಬೇಕು ಎನ್ನುವುದನ್ನು ಅವರು ಒಪ್ಪುವುದಿಲ್ಲ. ಅವರಿಗೆ ಇಲ್ಲಿನ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಹೇಳಿದ್ದರು.
ಸಮಾವೇಶ ಮುಗಿಸಿ ರೋಜಾ, ಜೋಗಿ ರಮೇಶ್, ವೈ.ವಿ.ಸುಬ್ಬಾರೆಡ್ಡಿ ಮತ್ತಿತರು ಏರ್ಪೋರ್ಟ್ಗೆ ಬರುತ್ತಿದ್ದರು. ಅದೇ ವೇಳೆ ವಿಶಾಖಪಟ್ಟಣಕ್ಕೆ ಆಗಮಿಸಲಿರುವ ಪವನ್ ಕಲ್ಯಾಣ್ರನ್ನು ಸ್ವಾಗತಿಸಲು ಅವರ ಬೆಂಬಲಿಗರು ಅಲ್ಲಿಗೆ ಬಂದಿದ್ದರು. ರೋಜಾ ಮತ್ತಿತರರನ್ನು ನೋಡುತ್ತಿದ್ದಂತೆಯೇ ಅವರೆಲ್ಲ ಕೆರಳಿ ದಾಳಿ ಮಾಡಿದ್ದಾರೆ. ಈ ಗಲಾಟೆಯಲ್ಲಿ ರೋಜಾ ಕಾರು ಚಾಲಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಆಂಧ್ರಕ್ಕೆ ಮೂರು ರಾಜಧಾನಿ ರಚನೆ ಮಾಡುವ ಸಂಬಂಧ ಕಾನೂನು ಹೋರಾಟವೂ ನಡೆಯುತ್ತಿದೆ. ಕಳೆದ ತಿಂಗಳು ಆಂಧ್ರಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ಮೂವರು ಸದಸ್ಯರ ವಿಭಾಗೀಯ ಪೀಠ ಈ ಬಗ್ಗೆ ತೀರ್ಪು ನೀಡಿದೆ. ಆಂಧ್ರಪ್ರದೇಶದ ರಾಜಧಾನಿ ಬದಲಾವಣೆ ಮಾಡುವ ಅಥವಾ ರಾಜಧಾನಿಯನ್ನು ತ್ರಿವಿಭಜಿಸಲು ಆಂಧ್ರ ಸರ್ಕಾರಕ್ಕೆ ಯಾವುದೇ ಶಾಸಕಾಂಗೀಯ ಅರ್ಹತೆ ಇಲ್ಲ ಎಂದು ಹೇಳಿದೆ.
ಇದನ್ನೂ ಓದಿ: Kantara Telugu | ತೆಲುಗು ರಾಜ್ಯಗಳಲ್ಲೂ ಕಾಂತಾರ ಸಿನಿಮಾಗೆ ಜೈಕಾರ