ನವ ದೆಹಲಿ: ಉತ್ತರ ಭಾರತದಲ್ಲಿ ತೀವ್ರತರನಾದ ಚಳಿ ಬೀಳುತ್ತಿದೆ. ದೆಹಲಿ, ಪಂಜಾಬ್, ಹರ್ಯಾಣ, ಉತ್ತರಖಾಂಡ್, ಉತ್ತರ ಪ್ರದೇಶ, ರಾಜಸ್ಥಾನದಲ್ಲೆಲ್ಲ ವಿಪರೀತ ಚಳಿ ವಾತಾವರಣ (Cold Wave) ಇದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಭಾನುವಾರ -4.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಪಂಜಾಬ್, ರಾಜಸ್ಥಾನ, ಹರ್ಯಾಣ, ದೆಹಲಿ ಮತ್ತು ಮಧ್ಯಪ್ರದೇಶದ ಪಶ್ಚಿಮ ಭಾಗಗಳಲ್ಲಿ ಇನ್ನೂ ವಾರಗಳ ಕಾಲ ಹೀಗೆ ಚಳಿಗಾಳಿ ಮತ್ತು ಶೀತಅಲೆ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ರಾಜಸ್ಥಾನದ ಮರಳುಗಾಡಿನಲ್ಲಿ ಸದಾ ಉಷ್ಣತೆ. ಆದರೆ ಈಗ ಗಡಗಡ ಎನ್ನಿಸುವಷ್ಟು ಚಳಿ ಶುರುವಾಗಿದೆ. ಥಾರ್ ಮರುಭೂಮಿ ಬಳಿ ಇರುವ ಚುರುವಿನಲ್ಲಿ ಮೈನಸ್ 2.5ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಪಂಜಾಬ್ನಲ್ಲೂ ಭಯಂಕರ ಚಳಿ-ಶೀತ ಅಲೆಯ ವಾತಾವರಣ ಇದೆ. ಫರೀದ್ಕೋಟ್ನಲ್ಲಿ -1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಹಾಗೇ, ಅಮೃತ್ಸರ್ನಲ್ಲಿ 1.6ಡಿಗ್ರಿ, ಗುರುದಾಸ್ಪುರದಲ್ಲಿ 3.7 ಡಿಗ್ರಿ ಸೆಲ್ಸಿಯಸ್, ಪಟಿಯಾಲಾ 4.2ಡಿಗ್ರಿ, ಭಟಿಂಡಾದಲ್ಲಿ 1 ಡಿಗ್ರಿ, ಲುಧಿಯಾನಾದಲ್ಲಿ 4.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭಾನುವಾರವೂ ಚಳಿ ವಾತಾವರಣ ಮುಂದುವರಿದಿತ್ತು. ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವೆನಿಸಿರುವ ಸಫ್ದರ್ಜಂಗ್ನಲ್ಲಿ 4.7ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ, ಜಫರ್ಪುರ್ನಲ್ಲಿ 2.6ಡಿಗ್ರಿ, ಲೋಧಿ ಮಾರ್ಗದಲ್ಲಿ 3.8ಡಿಗ್ರಿ ಸೆಲ್ಸಿಯಸ್, ಅಯನ್ಗರ್ನಲ್ಲಿ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜನವರಿ 17-18ರವರೆಗೂ ಇದೇ ರೀತಿ ಚಳಿಯ ವಾತಾವರಣ ಇರಲಿದ್ದು, ಅದಾದ ಬಳಿಕ ತಾಪಮಾನ ಸ್ವಲ್ಪ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Asthma Treatment | ಚಳಿಗಾಲದಲ್ಲಿ ಅಸ್ತಮಾ ಕಾಡದಂತೆ ತಡೆಯುವುದು ಹೇಗೆ?