ಉತ್ತರ ಪ್ರದೇಶ ಬಹುಜನ ಸಮಾಜ ಪಾರ್ಟಿ ಶಾಸಕರಾಗಿದ್ದ ರಾಜು ಪಾಲ್ ಹತ್ಯೆ ಕೇಸ್ನಲ್ಲಿ (2005ರಲ್ಲಿ ನಡೆದಿದ್ದ ಕೊಲೆ)ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಎಂಬುವರನ್ನು ಪ್ರಯಾಗ್ ರಾಜ್ನಲ್ಲಿ ಶುಕ್ರವಾರ ಗುಂಡಿಟ್ಟುಕೊಂದಿದ್ದಾರೆ. ಇದೇ ವಿಷಯ ಇಂದು ಬೆಳಗ್ಗೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವಿನ ತೀವ್ರಸ್ವರೂಪದ ವಾಗ್ವಾದಕ್ಕೆ ಕಾರಣವಾಯಿತು. ‘ನೀವು ಪೋಷಿಸಿರುವ ಕ್ರಿಮಿನಲ್ಗಳು, ಮಾಫಿಯಾಗಳಿಗೆ ನಾವು ಮಣ್ಣು ಮುಕ್ಕಿಸುತ್ತೇವೆ’ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಅಖಿಲೇಶ್ ಯಾದವ್ ಉದ್ದೇಶಿಸಿ ಗುಡುಗಿದರು.
ರಾಜ್ ಪಾಲ್ ಹತ್ಯೆ ಕೇಸ್ನಲ್ಲಿ ಪ್ರಮುಖ ಸಾಕ್ಷಿಯಾಗಿರುವ ಉಮೇಶ್ ಪಾಲ್ಗೆ ಪೊಲೀಸ್ ಭದ್ರತೆ ಇತ್ತು. ಶುಕ್ರವಾರ ಅವರು ಎಸ್ಯುವಿಯಲ್ಲಿ, ತಮ್ಮ ಪೊಲೀಸ್ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಯಾಗ್ರಾಜ್ನಲ್ಲಿರುವ ತಮ್ಮ ಬಳಿ ಬಂದು, ಕಾರಿನಿಂದ ಕೆಳಗೆ ಇಳಿದಿದ್ದಾರೆ. ಆಗ ಅಪರಿಚಿತನೊಬ್ಬ ಬಂದು ಗುಂಡಿನ ದಾಳಿ ನಡೆಸಿದ್ದಾನೆ. ಅಷ್ಟೇ ಅಲ್ಲ, ಅವರ ಕಾರಿನತ್ತ ಕಚ್ಚಾಬಾಂಬ್ ಕೂಡ ಎಸೆಯಲಾಗಿದ್ದು, ಸ್ಫೋಟಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
2005ರಲ್ಲಿ ರಾಜು ಪಾಲ್ ಕೊಲೆಯಾಗಿತ್ತು. ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿದ್ದ ಇವರು, ಅಲಹಾಬಾದ್ ಪಶ್ಚಿಮ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಖಾಲಿದ್ ಆಜಿಂ ವಿರುದ್ಧ ಗೆದ್ದು ಶಾಸಕರಾಗಿದ್ದರು. ಈ ಖಾಲಿದ್ ಅವರು ಮಾಜಿ ಸಂಸದ (ಸಮಾಜವಾದಿ ಪಕ್ಷದ ಆಗಿನ ಸಂಸದ) ಆತಿಕ್ ಅಹ್ಮದ್ ಅವರ ಕಿರಿಯ ಸಹೋದರ ಮತ್ತು ರಾಜು ಪಾಲ್ ಕೊಲೆಯ ಪ್ರಮುಖ ಆರೋಪಿ ಇದೇ ಆತಿಕ್ ಅಹ್ಮದ್. 2004ರಿಂದ 2008ರವರೆಗೆ ಫುಲ್ಪುರ ಕ್ಷೇತ್ರದ ಸಂಸದನಾಗಿದ್ದ. 2005ರಲ್ಲಿ ಹತ್ಯೆಯಲ್ಲಿ ಆತಿಕ್ ಕೈವಾಡ ಇದೆ ಎಂಬ ಆರೋಪದ ಬೆನ್ನಲ್ಲೇ 2008ರಲ್ಲಿ ಸಮಾಜವಾದಿ ಪಕ್ಷ ಅವನನ್ನು ಉಚ್ಚಾಟನೆ ಮಾಡಿತ್ತು. ಸದ್ಯ ಆತಿಕ್ ಗುಜರಾತ್ ಜೈಲಿನಲ್ಲಿಯೇ ಇದ್ದಾನೆ. ಇದೀಗ ಉಮೇಶ್ ಪಾಲ್ ಹತ್ಯೆಯ ವಿಷಯವನ್ನು ಇಂದು ಸಮಾಜವಾದಿ ಪಕ್ಷ ದೊಡ್ಡದಾಗಿ ಮಾಡಿ, ಯೋಗಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದರು. ಇದು ಬಿಜೆಪಿ ಸರ್ಕಾರದ ವೈಫಲ್ಯ ಎಂದು ಹೇಳಿದರು.
ಅದಕ್ಕೆ ಖಡಕ್ ಆಗಿ ಪ್ರತ್ಯುತ್ತರ ನೀಡಿದ ಯೋಗಿ ಆದಿತ್ಯನಾಥ್ ‘ಪ್ರಯಾಗ್ರಾಜ್ನಲ್ಲಿ ನಡೆದ ಉಮೇಶ್ ಪಾಲ್ ಹತ್ಯೆಯ ಕೇಸ್ನ್ನು ನಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯಡಿ ತನಿಖೆ ನಡೆಸಲಿದೆ. ಆದರೆ ಅಂದು ರಾಜ್ಪಾಲ್ ಹತ್ಯೆಯ ಹಿಂದೆ ಇದ್ದವರು, ಇದೇ ಸಮಾಜವಾದಿ ಪಕ್ಷವೇ ಪೋಷಿಸಿದ ಕ್ರಿಮಿನಲ್ಗಳು ಅಲ್ಲವೇ? ಸಮಾಜವಾದಿ ಪಕ್ಷದಲ್ಲಿ ಸಂಸದ(ಆತಿಕ್ ಅಹ್ಮದ್)ನಾಗಿ ಇದ್ದವರೇ ಅಲ್ಲವೇ?, ನಿಜ ಹೇಳಿ ಆತಿಕ್ನನ್ನು ಬೆಳೆಸಿದ್ದು ಇದೇ ಸಮಾಜವಾದಿ ಪಾರ್ಟಿ ಹೌದೋ, ಅಲ್ಲವೋ’ ಎಂದು ಕೇಳಿದರು. ‘ಹಾಗೇ, ನೀವು ಪೋಷಿಸಿದ ಮಾಫಿಯಾಗಳನ್ನು, ಕ್ರಿಮಿನಲ್ಗಳನ್ನು ನಾವು ಮಣ್ಣಲ್ಲಿ, ಮಣ್ಣಾಗಿಸುತ್ತೇವೆ’ ಎಂದು ಯೋಗಿ ಗುಡುಗಿದರು.
ಇದನ್ನೂ ಓದಿ: Suryakumar Yadav | ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಸೂರ್ಯಕುಮಾರ್ ಯಾದವ್
ವಿಧಾನಸಭೆಯಿಂದ ಹೊರಬಂದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ‘ಪ್ರಯಾಗ್ರಾಜ್ನಲ್ಲಿ ಕ್ರಿಮಿನಲ್ಗಳು ಬಂದು ಹಾಗೆ ಕಚ್ಚಾ ಬಾಂಬ್ ಎಸೆದಿದ್ದನ್ನು ನೋಡಿದಾಗಲೇ ಅರ್ಥವಾಗುತ್ತದೆ, ಈ ಸರ್ಕಾರದ ವೈಫಲ್ಯ ಏನು ಎಂಬುದು. ಹಾಡಹಗಲಲ್ಲೇ, ಸಾರ್ವಜನಿಕರ ಎದುರಲ್ಲೇ ಹೀಗೆ ಫೈರಿಂಗ್ ಮಾಡಲಾಗುತ್ತದೆ, ಬಾಂಬ್ ಎಸೆಯಲಾಗುತ್ತದೆ ಅಂದರೆ, ಇದು ರಾಮರಾಜ್ಯ ಹೌದೋ? ಅಲ್ಲವೋ ಎಂದು ಎಂಥವರಿಗಾದರೂ ಗೊತ್ತಾಗುತ್ತದೆ. ಉತ್ತರಪ್ರದೇಶದಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅದಕ್ಕೆ ಬಿಜೆಪಿ ಸರ್ಕಾರವೇ ಹೊಣೆ’ ಎಂದು ಹೇಳಿದರು.