ಚೆನ್ನೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಮತ್ತು ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೊಗಳಿದ್ದಾರೆ. ತಮಿಳುನಾಡಿನ ಹಿರಿಯ ಕಾಂಗ್ರೆಸ್ ನಾಯಕ ಎ.ಗೋಪಣ್ಣ ಅವರು ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ ಬಗ್ಗೆ ಬರೆದ ಪುಸ್ತಕವೊಂದನ್ನು ಚೆನ್ನೈನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಸ್ಟಾಲಿನ್, ‘ಈ ದೇಶದ ಸಂಸ್ಕೃತಿ, ಪರಂಪರೆ ಉಳಿಯಲು ಜವಾಹರ್ ಲಾಲ್ ನೆಹರೂ, ಮಹಾತ್ಮ ಗಾಂಧಿಯವರಂತಹ ನಾಯಕರು ಮತ್ತೆ ಬೇಕು’ ಎಂದು ಹೇಳಿದರು. ಹಾಗೇ, ರಾಹುಲ್ ಗಾಂಧಿಯನ್ನು ಹೊಗಳಿದ ತಮಿಳುನಾಡು ಸಿಎಂ ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾಷಣಗಳು ಈ ದೇಶದಲ್ಲಿ ಕಂಪನ ಸೃಷ್ಟಿಸುತ್ತಿವೆ’ ಎಂದರು.
‘ಪ್ರೀತಿಯ ಸಹೋದರ ರಾಹುಲ್ ಗಾಂಧಿಯವರು ಇಡೀ ದೇಶಾದ್ಯಂತ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಭಾರತ್ ಜೋಡೋ ಯಾತ್ರೆ ನಮ್ಮ ರಾಜ್ಯದ ಕನ್ಯಾಕುಮಾರಿಯಿಂದ ಪ್ರಾರಂಭವಾದ ಬಗ್ಗೆ ಸಂತೋಷವಿದೆ. ರಾಹುಲ್ ಗಾಂಧಿ ಮಾತುಗಳು ದೇಶದಲ್ಲಿ ಕಂಪನ ಉಂಟು ಮಾಡುತ್ತಿವೆ. ಅವರು ಚುನಾವಣಾ ರಾಜಕೀಯದ ಬಗ್ಗೆಯಾಗಲೀ, ಪಕ್ಷ ರಾಜಕಾರಣದ ಬಗ್ಗೆಯಾಗಲೀ ಮಾತನಾಡುತ್ತಿಲ್ಲ. ಕೇವಲ ಸಿದ್ಧಾಂತ ರಾಜಕಾರಣದ ಬಗ್ಗೆ ಮಾತನ್ನಾಡುತ್ತಿದ್ದಾರೆ. ಅವರು ಅನೇಕ ಸಲ ಜವಾಹರ್ ಲಾಲ್ ನೆಹರೂ ಅವರಂತೆ ಮಾತನಾಡುತ್ತಾರೆ. ನೆಹರೂ-ಗಾಂಧಿ ಕುಟುಂಬದ ಕುಡಿ ಹೀಗೆ ಮಾತನಾಡುವುದರಲ್ಲಿ ಅಚ್ಚರಿಯಿಲ್ಲ. ರಾಹುಲ್ ಗಾಂಧಿ ಭಾಷಣ, ಅವರು ಜನಸಾಮಾನ್ಯರೊಟ್ಟಿಗೆ ಆಡುವ ಮಾತುಗಳು, ಬೆರೆಯುವ ರೀತಿ ಗೋಡ್ಸೆ ವಂಶಸ್ಥರಿಗೆ ಕಹಿಯಾಗಿ ಪರಿಣಮಿಸಿದೆ’ ಎಂದು ಸ್ಟಾಲಿನ್ ಹೇಳಿದರು.
ಜವಾಹರ್ ಲಾಲ್ ನೆಹರು ಒಬ್ಬರು ನಿಜ ಪ್ರಜಾಪ್ರಭುತ್ವವಾದಿ. ಸಂಸದೀಯ ಪ್ರಜಾಪ್ರಭುತ್ವದ ಸಂಕೇತ. ಅದೇ ಕಾರಣಕ್ಕೆ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳೂ ನೆಹರೂ ಅವರನ್ನು ಹೊಗಳುತ್ತವೆ. ಅವರು ಪ್ರಧಾನಿಯಾಗಿದ್ದಾಗ ಸಂಸತ್ತಿನಲ್ಲಿ ಯಾವುದೇ ವಿಷಯವನ್ನು ಮುಕ್ತವಾಗಿ ಚರ್ಚಿಸಬಹುದಿತ್ತು. ವಿರೋಧಕ್ಕೂ ಅವಕಾಶ ಇತ್ತು. ಆದರೆ ಈಗಿನ ಕೇಂದ್ರ ಸರ್ಕಾರದ ಆಡಳಿತದಲ್ಲಿ ಪರಿಸ್ಥಿತಿ ಹೀಗಿಲ್ಲ. ಯಾವ ವಿಷಯವನ್ನೂ ಚರ್ಚಿಸಲು ಪ್ರತಿಪಕ್ಷಗಳಿಗೆ ಅವಕಾಶ ಕೊಡುವುದೇ ಇಲ್ಲ ಎಂದು ಎಂ.ಕೆ.ಸ್ಟಾಲಿನ್ ಹೇಳಿದರು. ‘ಈಗ ಮತ್ತೊಮ್ಮೆ ದೇಶದಲ್ಲಿ ಒಗ್ಗಟ್ಟು, ಸಮಾನತೆ, ಜಾತ್ಯತೀತರೆ, ಭ್ರಾತೃತ್ವ ಸ್ಥಾಪಿಸಲು ನೆಹರು-ಗಾಂಧಿಯಂಥ ಮಹಾನ್ ನಾಯಕರ ಅಗತ್ಯವಿದೆ’ ಎಂದೂ ತಿಳಿಸಿದರು.
ಇದನ್ನೂ ಓದಿ: ಮೇಕೆದಾಟು ವಿಷಯದಲ್ಲಿ ಕೋರ್ಟೇ ಸುಪ್ರೀಂ, ಪ್ರಾಧಿಕಾರದ ಮಾತು ಕೇಳಲ್ಲ ಎಂದ ಸ್ಟಾಲಿನ್