ಇಂಫಾಲ್: ಮಣಿಪುರದಲ್ಲಿ ರಾಜ್ಯಾದ್ಯಂತ ಮುಂದಿನ 5ದಿನಗಳ ಕಾಲ ಇಂಟರ್ನೆಟ್ ಸೇವೆ ಅಮಾನತುಗೊಳಿಸಿ (Mobile internet suspended In Manipur) ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಚುರಚಂದಪುರ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಸೆಕ್ಷನ್ 144 ಜಾರಿಯಲ್ಲಿರಲಿದೆ. ಇದೆಕ್ಕೆಲ್ಲ ಕಾರಣ, ರಾಜ್ಯದಲ್ಲಿ ಭುಗಿಲೆದ್ದಿರುವ ಕೋಮು ಸಂಘರ್ಷ. ಒಂದಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ ಭಾಷಣವನ್ನು ವೈರಲ್ ಮಾಡಿದ್ದರು. ನಿರ್ದಿಷ್ಟ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಲಾದ ಈ ದ್ವೇಷ ಭಾಷಣದಿಂದಾಗಿ ಚುರಚಂದಪುರ ಮತ್ತು ಬಿಷ್ಣುಪುರ ಸೇರಿ ಇನ್ನೂ ಕೆಲವು ಕಡೆಗಳಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ನಾಲ್ಕೈದು ಯುವಕರು ಸೇರಿ ವಾಹನವೊಂದಕ್ಕೆ ಬೆಂಕಿ ಇಟ್ಟಿದ್ದಾರೆ.
ಶನಿವಾರ ಮಧ್ಯಾಹ್ನ 3.35ರ ಹೊತ್ತಿಗೆ ಟಿಡ್ಡಿಮ್ ರಸ್ತೆ (ರಾಷ್ಟ್ರೀಯ ಹೆದ್ದಾರಿ)ಯ ಬಳಿ ಇಕೊ ವ್ಯಾನ್ವೊಂದು ಹೊತ್ತಿ ಉರಿಯುತ್ತಿತ್ತು. ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಯುವಕರೇ ಅದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಜೀವಹಾನಿಯಂಥ ಘಟನೆ ನಡೆದಿಲ್ಲ. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಪ್ರಚೋದಕ ಪೋಸ್ಟ್ಗಳು, ಫೋಟೋಗಳು, ಸುಳ್ಳು ಸುದ್ದಿಗಳು ವೈರಲ್ ಆಗುತ್ತಿದ್ದವು. ಹೀಗೆ ಬಿಟ್ಟರೆ, ಇನ್ನಷ್ಟು ಸಂಘರ್ಷಕ್ಕೆ ಕಾರಣವಾಗಬಹುದು. ಹೀಗಾಗಿ ಕೋಮು ಸೌಹಾರ್ದತೆ ಸಂಪೂರ್ಣ ಕದಡಿ, ಪ್ರಾಣಾಪಾಯವಾಗುವ ಸಾಧ್ಯತೆಯೂ ಇದೆ. ಪರಿಸ್ಥಿತಿ ಕೈತಪ್ಪಿ ಹೋಗುವುದಕ್ಕೂ ಮೊದಲು ಕ್ರಮ ಕೈಗೊಳ್ಳುವ ಸಲುವಾಗಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Manipur landslide | ಮಣಿಪುರದಲ್ಲಿ ಭೀಕರ ಭೂಕುಸಿತ, 18 ಯೋಧರು ಸೇರಿ 24 ಮಂದಿ ದುರ್ಮರಣ